ನವದೆಹಲಿ(ಮೇ.20):  ಭಾರತದ ಸರ್ಕಾರಿ ಸ್ವಾಮ್ಯದ ದೂರದರ್ಶನವು ‘ಬಿಬಿಸಿ ವಲ್ಡ್‌ರ್‍’ ಮಾದರಿಯಲ್ಲಿ ಅಂತಾರಾಷ್ಟ್ರೀಯ ಟೀವಿ ಚಾನೆಲ್‌ ಆರಂಭಿಸಲು ಸಿದ್ಧತೆ ಆರಂಭಿಸಿದೆ. ಭಾರತ ಸರ್ಕಾರದ ಬಗ್ಗೆ ಜಾಗತಿಕವಾಗಿ ಕೇಳಿಬರುವ ಟೀಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಇಂಥ ಸಿದ್ಧತೆ ಆರಂಭವಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ, ‘ಡಿಡಿ ಇಂಡಿಯಾ’ ಎಂಬ ಚಾನೆಲ್‌ ಆರಂಭಿಸಿ ನಂತರ ಅದನ್ನು ‘ಡಿಡಿ ವಲ್ಡ್‌ರ್‍’ ಎಂದು ಬದಲಿಸಲಾಗಿತ್ತು. ಆದರೆ 2019ರಲ್ಲಿ ಮತ್ತೆ ಅದಕ್ಕೆ ‘ಡಿಡಿ ಇಂಡಿಯಾ’ ಎಂದು ಮರುನಾಮಕರಣ ಮಾಡಲಾಯಿತು. ಈ ವಾಹಿನಿ ಭಾರತ ಹಾಗೂ ವಿಶ್ವದ ಸುದ್ದಿಗಳೆರೆಡನ್ನೂ ಒದಗಿಸುವ ಇಂಗ್ಲಿಷ್‌ ಸುದ್ದಿ ವಾಹಿನಿ ಆಗಿದೆ. ಆದರೆ ಅನಿವಾಸಿ ಭಾರತೀಯರ ಆಧರಿತ ಸುದ್ದಿಗಳೇ ಹೆಚ್ಚು ಇದರಲ್ಲಿ ಪ್ರಸಾರ ಆಗುತ್ತವೆ. ಹೀಗಾಗಿ ಇದು ಪೂರ್ಣಮಟ್ಟದ ಅಂತಾರಾಷ್ಟ್ರೀಯ ವಾಹಿನಿ ಎನ್ನಿಸಿಕೊಂಡಿಲ್ಲ.

ಜಾಗತಿಕ ಚಾನೆಲ್‌ ಏಕೆ

ಜಾಗತಿಕ ಮಟ್ಟದ ಸುದ್ದಿಗಳನ್ನು ನೀಡುತ್ತ, ಭಾರತದ ನೀತಿ ನಿರೂಪಣೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸಲು ‘ಡಿಡಿ ಇಂಟರ್‌ನ್ಯಾಷನಲ್‌’ ಚಾನೆಲ್‌ ಆರಂಭಿಸುವ ಸಿದ್ಧತೆಗಳು ಆರಂಭವಾಗಿವೆ. ಇದಕ್ಕಾಗಿ ಅಂತಾರಾಷ್ಟ್ರೀಯ ಚಾನೆಲ್‌ ಆರಂಭಿಸುವಲ್ಲಿ ಪಳಗಿರುವ ಸಂಸ್ಥೆಗಳು ಅಥವಾ ವ್ಯಕ್ತಿಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಸಂಸ್ಥೆಗಳನ್ನು ಬಿಡ್ಡಿಂಗ್‌ಗೆ ಆಹ್ವಾನಿಸಲಾಗಿದ್ದು, ವಿಜೇತರಿಂದ ‘ವಿಸ್ತೃತ ಯೋಜನಾ ವರದಿ’ ತರಿಸಿಕೊಳ್ಳಲಾಗುತ್ತದೆ. ಈ ವರದಿ ಆಧರಿಸಿ ಚಾನೆಲ್‌ ಆರಂಭಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಮೋದಿ ಸರ್ಕಾರವನ್ನು ಸ್ವೀಡನ್‌ನ ‘ವಿ-ಡೆಮ್‌’ ಎಂಬ ಸಂಸ್ಥೆ ‘ಚುನಾಯಿತ ನಿರಂಕುಶ ಸರ್ಕಾರ’ ಎಂದು ಇತ್ತೀಚೆಗೆ ಟೀಕಿಸಿತ್ತು. ಅಲ್ಲದೆ, ಅಮೆರಿಕದ ಫ್ರೀಡಂ ಹೌಸ್‌ ಎಂಬ ಚಿಂತಕರ ಚಾವಡಿ, ‘ಸ್ವಾತಂತ್ರ್ಯ ಸೂಚ್ಯಂಕ’ದಲ್ಲಿ ಭಾರತವನ್ನು ‘ಭಾಗಶಃ ಸ್ವತಂತ್ರ ದೇಶ’ ಎಂದು ಜರಿದಿತ್ತು. ಆಗ ಮೋದಿ ಸರ್ಕಾರಕ್ಕೆ ಅಂತಾರಾಷ್ಟ್ರೀಯ ವಲಯದಲ್ಲಿ ಭಾರತಕ್ಕೆ ಭಾರಿ ಇರಿಸು ಮುರುಸು ಆಗಿತ್ತು. ಇದರ ಬೆನ್ನಲ್ಲೇ ಜಾಗತಿಕ ಡಿಡಿ ಚಾನೆಲ್‌ ಆರಂಭಿಸುವ ಚಿಂತನೆ ಮೊಳಕೆಯೊಡೆದಿತ್ತು.