ನವದೆಹಲಿ(ಜ.20): ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು ಹೆಚ್ಚಿಸುವ ಸಂಬಂಧ ವರದಿ ನೀಡಲು ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯು ತನ್ನ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಪ್ರಧಾನಿ ಕಾರಾರ‍ಯಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಶೀಘ್ರವೇ ಸರ್ಕಾರ ಹೆಣ್ಣು ಮಕ್ಕಳ ವಿವಾಹ ವಯೋಮಿತಿಯನ್ನು 18ರಿಂದ 21ಕ್ಕೆ ಏರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ ವರ್ಷಾರಂಭದಲ್ಲಿ ಕೇಂದ್ರ ಸರ್ಕಾರ ಜಯಾ ಜೇಟ್ಲಿ ನೇತೃತ್ವದಲ್ಲಿ 10 ಮಂದಿ ಸದಸ್ಯರ ಕಾರ್ಯಪಡೆಯೊಂದನ್ನು ರಚಿಸಿತ್ತು. ಅದಕ್ಕೆ ಹೆಣ್ಣುಮಕ್ಕಳ ವಿವಾಹ ವಯೋಮಿತಿ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚಿಸಲಾಗಿತ್ತು. ಜೊತೆಗೆ ಇಂಥ ಶಿಫಾರಸುಗಳ ಜೊತೆಗೆ, ಅದರ ಜಾರಿಗೆ ಹೊಸ ಕಾನೂನು ಅಥವಬಾ ಹಾಲಿ ಜಾರಿಯಲ್ಲಿರುವ ಕಾನೂನು ತಿದ್ದುಪಡಿ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಅದರ ಜಾರಿಯ ವಿಧಾನವನ್ನು ವಿಸ್ತೃತವಾಗಿ ವಿವರಿಸುವಂತೆಯೂ ಸೂಚಿಸಲಗಿತ್ತು.

ಆ ಕಾರ್ಯಪಡೆಯು ತಾಯ್ತನಕ್ಕೆ ಅಗತ್ಯರುವ ಆರೋಗ್ಯ, ಪೌಷ್ಠಿಕಾಂಶ, ಶಿಶು ಮರಣ ದರ, ಗರ್ಭಿಣಿಯರ ಮರಣ ದರ, ಲಿಂಗಾನುಪಾತ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

74ನೇ ಸ್ವಾತಂತ್ರ್ಯ ದಿನೋತ್ಸವದಂದು ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಈ ಬಗ್ಗೆ ಸಮಿತಿ ರಚಿಸಲಾಗಿದೆ. ಸಮಿತಿ ಶಿಫಾರಸುಗಳ ಆಧಾರದ ಮೇಲೆ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಸದ್ಯ ಹೆಣ್ಣು ಮಕ್ಕಳ ವಿವಾಹದ ವಯಸ್ಸು 18 ಎಂದು ನಿಗದಿಪಡಿಸಲಾಗಿದೆ.