ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನ 5.0 ಅಡಿಯಲ್ಲಿ, ಸರ್ಕಾರಿ ಕಚೇರಿಗಳ ಅನುಪಯುಕ್ತ ವಸ್ತುಗಳನ್ನು ಮಾರಾಟ ಮಾಡಿ 800 ಕೋಟಿ ರೂ. ಆದಾಯ ಗಳಿಸಲಾಗಿದೆ. ಈ ಮೊತ್ತವು ಇಸ್ರೋದ ಚಂದ್ರಯಾನ-3 ಯೋಜನೆಗೆ ತಗುಲಿದ ವೆಚ್ಚಕ್ಕಿಂತ ಹೆಚ್ಚಾಗಿದ್ದು, ಈ ಅಭಿಯಾನದಲ್ಲಿ ಸುಮಾರು 232 ಲಕ್ಷ ಚದರ ಅಡಿ ಜಾಗ ತೆರವು.
ನವದೆಹಲಿ (ನ.10) : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ತಿಂಗಳು ನಡೆಸಿದ ಬೃಹತ್ ಸ್ವಚ್ಛತಾ ಅಭಿಯಾನ 5.0 ಅಡಿಯಲ್ಲಿ, ಸರ್ಕಾರಿ ಕಚೇರಿಗಳಲ್ಲಿದ್ದ ಅನುಪಯುಕ್ತ ವಸ್ತುಗಳನ್ನು ಮಾರಾಟ ಮಾಡಿದ್ದು, ಅದರಿಂದ 800 ಕೋಟಿ ರು. ಆದಾಯ ಗಳಿಸಿದೆ. ಈ ಮೊತ್ತವು 2023ರಲ್ಲಿ ಇಸ್ರೋದ ಯಶಸ್ವಿ ಚಂದ್ರಯಾನ 3 ಯೋಜನೆಗೆ ವೆಚ್ಚವಾಗಿದ್ದ 615 ಕೋಟಿ ರು.ಗಿಂತ ಅಧಿಕ.
ಇದನ್ನೂ ಓದಿ:ಬಿಹಾರ: ಬಹಿರಂಗ ಪ್ರಚಾರಕ್ಕೆ ತೆರೆ, ನಾಳೆ ಅಂತಿಮ ಸುತ್ತಿನ ಮತದಾನ, ನ.14ಕ್ಕೆ ಫಲಿತಾಂಶ
ಸುಮಾರು 11.58 ಲಕ್ಷ ಕಚೇರಿಗಳಲ್ಲಿ ಅ.2ರಿಂದ ಅ.31ರ ನಡುವೆ ನಡೆದ ಸ್ವಚ್ಛತಾ ಕಾರ್ಯದಲ್ಲಿ ಸುಮಾರು 29 ಲಕ್ಷ ಕಡತ ವಿಲೇವಾರಿ ಮಾಡಲಾಗಿದೆ. ಜತೆಗೆ, ಉಪಯೋಗವಿಲ್ಲದ ದಾಖಲೆಗಳು, ಎಲೆಕ್ಟ್ರಾನಿಕ್ ತ್ಯಾಜ್ಯ, ಪೀಠೋಪಕರಣ, ವಾಹನ, ಯಂತ್ರೋಪಕರಣ ಗುಜರಿಗೆ ಹಾಕಲಾಗಿದೆ. ಈ ವೇಳೆ 232 ಲಕ್ಷ ಚದರ ಅಡಿಯಲ್ಲಿ ಹರಡಿದ್ದ ವಸ್ತುಗಳನ್ನು ತೆರವುಗೊಳಿಸಲಾಗಿದೆ.
ಈ ಪ್ರಮಾಣದಲ್ಲಿ ಕಚೇರಿಯನ್ನು ಖಾಲಿ ಮಾಡಿದ್ದು ಇದೇ ಮೊದಲು.
2021ರಲ್ಲಿ ಈ ಅಭಿಯಾನ ಆರಂಭವಾದಾಗಿನಿಂದ ಸರ್ಕಾರ ಸುಮಾರು 4,100 ಕೋಟಿ ರು. ಗಳಿಸಿದೆ.
