ಜೈಪುರ್(ಜ.28): ಪ್ರಧಾನಿ ಮೋದಿ ಅವರಿಗೆ ಅರ್ಥ ನೀತಿ ಅರ್ಥವಾಗದಿರುವ ಪರಿಣಾಮ ದೇಶ ಭಯಂಕರ ಆರ್ಥಿಕ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ‘ಯುತ್ ಆಕ್ರೋಶ್’ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ಆರ್ಥಿಕ ವ್ಯವಸ್ಥೆ ಹಳಿ ತಪ್ಪಿರುವುದಕ್ಕೆ ಪ್ರಧಾನಿ ಮೋದಿ ಅವರ ದುರ್ಬಲ ಆರ್ಥಿಕ ನೀತಿಗಳೇ ಕಾರಣ ಎಂದು ಹರಿಹಾಯ್ದರು.

ನಗದು ಅಪನಗದೀಕರಣ ದೇಶದ ಅರ್ಥ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ ಎಂಬುದನ್ನು ದೇಶದ ಮಕ್ಕಳನ್ನೂ ಕೇಳಿದರೂ ಹೇಳುತ್ತಾರೆ ಎಂದು ರಾಹುಲ್ ಈ ವೇಳೆ ವ್ಯಂಗ್ಯವಾಡಿದರು.

ಭಾರತದ ಆರ್ಥಿಕ ಪ್ರಗತಿ ಶೇ.4.8ಕ್ಕೆ ಕುಸಿತ: ಐಎಂಎಫ್‌

ದೇಶದ ಅರ್ಥ ವ್ಯವಸ್ಥೆಯ ಕುಸಿತದಿಂದ ಜಾಗತಿಕವಾಗಿ ಭಾರತದ ಗೌರವ ಮಣ್ಣುಪಾಲಾಗಿದೆ. ಇದಕ್ಕೆಲ್ಲಾ ಕಾರಣ ಪ್ರಧಾನಿ ಮೋದಿ ಅವರಿಗೆ ಅರ್ಥ ವ್ಯವಸ್ಥೆಯ ಜ್ಞಾನ ಇಲ್ಲದಿರುವುದು ಎಂದು ರಾಹುಲ್ ತೀವ್ರ ವಾಗ್ದಾಳಿ ನಡೆಸಿದರು.

ದೇಶದ ಯುವ ಸಮುದಾಯ ಉದ್ಯೋಗವಿಲ್ಲದೇ ಸಂಕಟಪಡುತ್ತಿದೆ. ಆದರೆ ತನ್ನ ವೈಫಲ್ಯವನ್ನು ಮರೆಮಾಚಲು ಮೋದಿ ಸರ್ಕಾರ ಧರ್ಮ ಧರ್ಮಗಳ ನಡುವೆ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಂಭೀರ ಆರೋಪ ಮಾಡಿದರು. 

ಆರ್ಥಿಕ ಹಿಂಜರಿತದಿಂದ ದೇಶದಲ್ಲಿ 16 ಲಕ್ಷ ಉದ್ಯೋಗ ನಷ್ಟ: ಎಸ್‌ಬಿಐ

ದೇಶದ ಸಾಮರಸ್ಯ ಕದಡಿರುವ ಮೋದಿ ಸರ್ಕಾರ, ಭಾರತವನ್ನು ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದೆ. ಇದಕ್ಕೆ ಕಾಂಗ್ರೆಸ್ ಎಂದಿಗೂ ಅವಕಾಶ ಕೊಡುವುದಿಲ್ಲ ಎಂದು ರಾಹುಲ್ ಈ ವೇಳೆ ಭರವಸೆ ನೀಡಿದರು.