* ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ * ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನ* ದೇವಸ್ಥಾನಗೊಳಗಿನ ವಿಗ್ರಹಗಳನ್ನೂ ಸುಟ್ಟಿರುವ ದೃಶ್ಯಾವಳಿಗಳ ವಿಡಿಯೋ

ಇಸ್ಲಮಾಬಾದ್(ಆ.05): ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂಗಳ ಮತಾಂತರ ಹಾಗೂ ದೇವಾಲಯಗಳ ಧ್ವಂಸ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಸದ್ಯ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನವೊಂದನ್ನು ಮುಸಲ್ಮಾನರ ಗುಂಪೊಂದು ಧ್ವಂಸಗೊಳಿಸಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇಷ್ಟೇ ಅಲ್ಲದೇ ಉದ್ರಿಕ್ತರು ದೇವಸ್ಥಾನಗೊಳಗಿನ ವಿಗ್ರಹಗಳನ್ನೂ ಸುಟ್ಟಿರುವ ದೃಶ್ಯಾವಳಿಗಳು ವಿಡಿಯೋದಲ್ಲಿ ದಾಖಲಾಗಿವೆ.

ಪಾಕಿಸ್ತಾನದ ಹಿಂದೂ ಸಮುದಾಯದ ನಾಯಕ ಹಾಗೂ ಆಡಳಿತ ಪಕ್ಷ ಪಿಟಿಐ ಸಂಸದ ರಮೇಶ್ ಕುಮಾರ್ ವಂಕ್ವಾನಿ ಘಟನೆಯ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹಿಂದೂ ದೇಗುಲದ ಮೂರ್ತಿಗಳನ್ನು ಧ್ವಂಸಗೊಳಿಸುತ್ತಿರುವ ಮುಸಲ್ಮಾನರು 'ನಾರಾ-ಏ-ತಕ್ಬೀರ್' ಹಾಗೂ 'ಅಲ್ಲಾ-ಹು-ಅಕ್ಬರ್' ಎನ್ನುವ ಘೋಷಣೆಗಳನ್ನು ಕೂಗುತ್ತಿರುವುದನ್ನು ಗಮನಿಸಬಹುದು.

ಇನ್ನು ಘಟನೆಯ ಬಗ್ಗೆ ಬರೆದುಕೊಂಡಿರುವ ರಮೇಶ್ 'ರಹೀಮ್​ ಖಾನ್ ಯಾರ್​ ಖಾನ್​ ಜಿಲ್ಲೆಯಲ್ಲಿರುವ, ಭೋಂಗ್​ ನಗರದಲ್ಲಿ ಈ ಸಿದ್ಧಿವಿನಾಯಕ ದೇವಸ್ಥಾನದ ದೃಶ್ಯವಿದು. ನಿನ್ನೆಯಿಂದ ಇಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸ್ಥಳೀಯ ಪೊಲೀಸರ ನಿರ್ಲಕ್ಷ್ಯ ನಾಚಿಕೆಗೀಡು ಮಾಡುವಂತಹದ್ದು. ಈ ಬಗ್ಗೆ ಚೀಫ್ ಜಸ್ಟೀಸ್ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.

Scroll to load tweet…

ಇನ್ನು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಪಾಕಿಸ್ತಾನ ರೇಂಜರ್ಸ್​​ನ್ನು ರಕ್ಷಣೆಗೆ ನಿಯೋಜಿಸಲಾಗಿದೆ. ದೇಗುಲ ಇರುವ ಸುತ್ತಮುತ್ತ 100 ಹಿಂದೂ ಕುಟುಂಬಗಳು ಇದ್ದು, ಅವರೀಗ ಅಪಾಯದಲ್ಲಿದ್ದಾರೆ. ಎಲ್ಲ ರೀತಿಯ ಭದ್ರತಾ ಕ್ರಮಗಳನ್ನೂ ವಹಿಸಲಾಗಿದೆ ಎಂದೂ ಸ್ಥಳೀಯ ಸರ್ಕಾರ ತಿಳಿಸಿದೆ.