ಐಜ್ವಾಲ್(ನ.28): ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ದೇಶದ ಮೊದಲ ಸಂಸದ ಎಂಬ ಕಳಂಕ ಹೊಂದಿರುವ ಮಿಜೋರಂ ರಾಜಕಾರಣಿ ಲಾಲ್ಡುಹೋಮ ಈಗ ಶಾಸಕತ್ವದಿಂದಲೂ ಅನರ್ಹಗೊಂಡಿದ್ದಾರೆ. ತನ್ಮೂಲಕ ರಾಜಕೀಯ ಜೀವನದಲ್ಲಿ ಎರಡು ಬಾರಿ ಅನರ್ಹಗೊಂಡ ವ್ಯಕ್ತಿ ಎಂಬ ಮತ್ತೊಂದು ಅಪಕೀರ್ತಿಗೆ ಭಾಜನರಾಗಿದ್ದಾರೆ. ವಿಶೇಷ ಎಂದರೆ, ಮಿಜೋರಂನಲ್ಲಿ ಅನರ್ಹಗೊಂಡ ಮೊದಲ ಶಾಸಕ ಕೂಡ ಅವರೇ ಆಗಿದ್ದಾರೆ!

ಮಾಜಿ ಐಪಿಎಸ್‌ ಅಧಿಕಾರಿಯಾಗಿರುವ ಲಾಲ್ಡುಹೋಮ ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತಾ ಹೊಣೆ ಹೊತ್ತಿದ್ದರು. 1984ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು ಪಕ್ಷಾಂತರ ನಿಷೇಧ ಕಾಯ್ದೆಯಡಿ 1988ರಲ್ಲಿ ಅನರ್ಹಗೊಂಡಿದ್ದರು. ತನ್ಮೂಲಕ ಆ ಕಾಯ್ದೆಯಡಿ ಸಂಸದ ಸ್ಥಾನ ಕಳೆದುಕೊಂಡ ದೇಶದ ಮೊದಲ ರಾಜಕಾರಣಿ ಅವರಾಗಿದ್ದರು.

ಇದೀಗ ಮಿಜೋರಂ ವಿಧಾನಸಭೆಯ ಪಕ್ಷೇತರ ಶಾಸಕರಾಗಿರುವ ಲಾಲ್ಡುಹೋಮ ಅವರು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿ ಜೋರಂ ಪೀಪಲ್ಸ್‌ ಮೂವ್‌ಮೆಂಟ್‌ ಎಂಬ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಿಜೋರಂ ಸ್ಪೀಕರ್‌ ಲಾಲ್ರಿನ್‌ಲಿಯಾನ ಅವರು ಲಾಲ್ಡುಹೋಮ ಅವರನ್ನು ಶುಕ್ರವಾರ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಭಾವಿ ರಾಜಕಾರಣಿಯಾಗಿರುವ ಲಾಲ್ಡುಹೋಮ 2018ರಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡರಲ್ಲೂ ಗೆದ್ದು, ಒಂದು ಸ್ಥಾನವನ್ನು ಉಳಿಸಿಕೊಂಡಿದ್ದರು.