ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ ಅಂತಿಮ ಪಟ್ಟಿ ಪ್ರಕಟ| ನಟ ಮಿಥುನ್‌ ಚಕ್ರವರ್ತಿ ಸ್ಪರ್ಧೆ ನಿರೀಕ್ಷೆ ಹುಸಿ

ಕೋಲ್ಕತಾ(ಮಾ.24): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ ತನ್ನ ಅಂತಿಮ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲೂ ಇತ್ತೀಚೆಗೆ ಪಕ್ಷ ಸೇರಿದ್ದ ಖ್ಯಾತ ನಟ ಮಿಥುನ್‌ ಚಕ್ರವರ್ತಿ ಅವರ ಹೆಸರು ಕಾಣಿಸಿಕೊಂಡಿಲ್ಲ. ಹೀಗಾಗಿ ಅವರು ಚುನಾವಣಾ ಕಣಕ್ಕೆ ಇಳಿಯಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ದಕ್ಷಿಣ ಕೊಲ್ಕತಾದ ರಾಶ್‌ಬೆಹಾರಿ ಕ್ಷೇತ್ರದಲ್ಲಿ ಮಿಥುನ್‌ ಸ್ಪರ್ಧಿಸಬಹುದೆಂಬ ಭಾರೀ ಸುದ್ದಿ ಇತ್ತು. ಆದರೆ ಈ ಕ್ಷೇತ್ರದಲ್ಲಿ ನಿವೃತ್ತ ಲೆ.ಜ.ಸುಬ್ರತಾ ಸಾಹಾ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ್ದ ಇದೇ ಸ್ಥಳದಲ್ಲಿನ ರಾರ‍ಯಲಿ ವೇಳೆ ಮಿಥುನ್‌ ಕೂಡ ಕಾಣಿಸಿಕೊಂಡಿದ್ದರು. ಅಲ್ಲದೆ, ‘ನಾನು ನೀರಿನಲ್ಲಿರುವ ಹಾವಲ್ಲ, ಮರುಭೂಮಿಯ ವಿಷ ಸರ್ಪ. ಒಮ್ಮೆ ಕಚ್ಚಿದರೆ ಕಥೆ ಅಷ್ಟೇ’ ಎಂದು ವಿಪಕ್ಷಗಳಿಗೆ ಎಚ್ಚರಿಕೆ ನೀಡಿದ್ದರು.