Asianet Suvarna News Asianet Suvarna News

ನಾಪತ್ತೆಯಾಗಿದ್ದ ಎರಡು ಮಕ್ಕಳ ಅಮ್ಮ ಗೋವಾ ಬೀಚ್‌ನಲ್ಲಿ ಕ್ಯಾಬ್ ಡ್ರೈವರ್‌ ಜೊತೆ ಪತ್ತೆ!

ಲಂಡನ್ ಮೂಲದ ಮಹಿಳೆಯೊಬ್ಬರು ಹೈದರಾಬಾದ್‌ನಲ್ಲಿ ಕ್ಯಾಬ್ ಚಾಲಕನಿಂದ ಕಿಡ್ನ್ಯಾಪ್ ಆಗಿರುವುದಾಗಿ ದೂರಿದ್ದರು. ಆದರೆ, ಪೊಲೀಸರ ತನಿಖೆಯಲ್ಲಿ  ಆಕೆ ಕ್ಯಾಬ್ ಚಾಲಕನೊಂದಿಗೆ ಗೋವಾಗೆ ಹೋಗಿರುವುದು ಬೆಳಕಿಗೆ ಬಂದಿದೆ. 

Missing London Woman Found Relaxing in Goa A Kidnapping Twist
Author
First Published Oct 10, 2024, 4:20 PM IST | Last Updated Oct 10, 2024, 4:20 PM IST

ಹೈದರಾಬಾದ್‌: ವಿಚಿತ್ರ ಕಿಡ್ನ್ಯಾಪ್ ಪ್ರಕರಣವೊಂದು ತೆಲಂಗಾಣದ ಹೈದರಾಬಾದ್‌ನಿಂದ ವರದಿಯಾಗಿದೆ.35 ವರ್ಷದ ಲಂಡನ್ ಮೂಲದ ಮಹಿಳೆಯೊಬ್ಬಳು ತಾನು ನಗರಕ್ಕೆ ಬಂದಾಗ ತನ್ನನ್ನು ಕ್ಯಾಬ್ ಚಾಲಕನೋರ್ವ ಕಿಡ್ಯ್ಯಾಪ್ ಮಾಡಿದ್ದಾನೆ ಎಂದು ದೂರಿದ್ದಳು. ಆಕೆಯ ಹಠಾತ್ ನಾಪತ್ತೆಯಿಂದ ಭಯಗೊಂಡ ಆಕೆಯ ಇಬ್ಬರು ಮಕ್ಕಳು ತಮ್ಮ ತಂದೆಗೆ ಈ ವಿಚಾರ ತಿಳಿಸಿದ್ದಾರೆ. ಇದಾದ ನಂತರ ಹೈದರಾಬಾದ್‌ನ ಸೈಬರಬಾದ್ ಪೊಲೀಸರಿಗೆ ಇಮೇಲ್ ಮೂಲಕ ಮಹಿಳೆಯ ಪತಿ  ದೂರು ನೀಡಿದ್ದಾರೆ. ಈ ವೇಳೆ ಆಕೆಯ ಮೊಬೈಲ್ ನಂಬರ್ ಜೊತೆ ಆಕೆಯನ್ನು ಟ್ರ್ಯಾಕ್ ಮಾಡಿದಾಗ ಆಕೆ ಹಾಗೂ ಕ್ಯಾಬ್ ಚಾಲಕ ಇಬ್ಬರೂ ಗೋವಾದಲ್ಲಿ ಜಾಲಿ ಮಾಡುತ್ತಿರುವುದು ಪತ್ತೆಯಾಗಿದೆ. 

ತಮ್ಮ ಅಮ್ಮ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಇಬ್ಬರು ಮಕ್ಕಳು ತಂದೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಹೈದರಾಬಾದ್‌ನಲ್ಲಿದ್ದ ತಂದೆ ಮತ್ತೆ ಲಂಡನ್‌ಗೆ ಹೋಗಿ ಇಮೇಲ್ ಮೂಲಕ ಸೈಬಾರಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ನಂತರ ರಾಜೀವ್ ಗಾಂಧಿ ವಿಮಾನ ನಿಲ್ದಾಣ ಠಾಣೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗೆ ವಿಚಾರಣೆ ಆರಂಭಿಸಿದಾಗ ಮಹಿಳೆ ಗೋವಾದಲ್ಲಿದ್ದು, ರಜೆ ಮುಗಿಸಿ ವಾಪಸ್ ಬರುತ್ತಿದ್ದಿದ್ದು, ತಿಳಿದು ಬಂದಿದೆ. 

ಈ ಪ್ರಕರಣ ಕಳೆದ ವಾರ ಬೆಳಕಿಗೆ ಬಂದಿತ್ತು. ಮಹಿಳೆ ತನ್ನಿಬ್ಬರು ಅಪ್ರಾಪ್ತ ಮಕ್ಕಳನ್ನು ಲಂಡನ್‌ನಲ್ಲಿ ಪಾರ್ಕೊಂದರಲ್ಲಿ ಬಿಟ್ಟು ಹೈದರಾಬಾದ್ ವಿಮಾನ ಹತ್ತಿದ್ದಳು. ಇತ್ತ ಆಕೆಯ ಪತಿ ಹೈದರಾಬಾದ್‌ ಮೂಲದವರಾಗಿದ್ದು, ಸಾಫ್ಟ್ವೇರ್ ಉದ್ಯೋಗಿಯಾಗಿದ್ದರು. ಇತ್ತೀಚೆಗೆ ಅವರು ತಮ್ಮ ತಾಯಿ ನಿಧನರಾದ ಹಿನ್ನೆಲೆಯಲ್ಲಿ ಅಂತಿಮ ಸಂಸ್ಕಾರಕ್ಕಾಗಿ ಹೈದರಾಬಾದ್‌ಗೆ ಬಂದಿದ್ದರು. 

ದೂರುದಾರರ ಪತ್ನಿ ಹಾಗೂ ಮಕ್ಕಳು ಕಳೆದ ಸೆಪ್ಟೆಂಬರ್‌ವರೆಗೂ ಹೈದರಾಬಾದ್‌ನ ಅಲ್ವಾಲದಲ್ಲಿ ವಾಸ ಮಾಡುತ್ತಿದ್ದರು. ಆತನ ಪತ್ನಿಗೆ ಟ್ರಿಪ್ ವೇಳೆ ಕ್ಯಾಬ್ ಚಾಲಕನ ಪರಿಚಯವಾಗಿದ್ದು, ಬಳಿಕ ಆತ್ಮೀಯರಾಗಿದ್ದಾರೆ.  ಈ ವಿಚಾರವನ್ನು ಮಹಿಳೆಯ ಪತಿಗೆ ಮನೆ ಮಂದಿ ತಿಳಿಸಿದ್ದಾರೆ. ಇದಾದ ನಂತರ ಸೆಪ್ಟೆಂಬರ್ ಎರಡನೇ ವಾರದಲ್ಲಿ ಆತ ತನ್ನ ಪತ್ನಿ ಹಾಗೂ ಮಕ್ಕಳನ್ನು ಲಂಡನ್‌ಗೆ ಕರೆದೊಯ್ದಿದ್ದಾರೆ. ಇದಾಗಿ 10 ದಿನದ ನಂತರ ದುರಾದೃಷ್ಟಕ್ಕೆ  ಮಹಿಳೆಯ ಪತಿಯ ತಾಯಿ ತೀರಿಕೊಂಡಿದ್ದು, ಹೀಗಾಗಿ ಅವರು ಮತ್ತೆ ಹೈದರಾಬಾದ್‌ಗೆ ಮರಳುವಂತಾಗಿದೆ. ಹೀಗಾಗಿ ಪತ್ನಿ ಮಕ್ಕಳ ಲಂಡನ್‌ನಲ್ಲಿ ಬಿಟ್ಟು ಮಹಿಳೆಯ ಪತಿ ಮತ್ತೆ ಹೈದರಾಬಾದ್‌ಗೆ ಬಂದಿದ್ದಾರೆ.  ಇದೇ ಸಮಯದಲ್ಲಿ ಪತ್ನಿ ತನ್ನಿಬ್ಬರು ಅಪ್ರಾಪ್ತ ಮಕ್ಕಳನ್ನು ಲಂಡನ್‌ನ ಪಾರ್ಕೊಂದರಲ್ಲಿ ಬಿಟ್ಟು ಸೀದಾ ಹೈದರಾಬಾದ್‌ ವಿಮಾನ ಹತ್ತಿದ್ದಾಳೆ.

ಇತ್ತ ಹೈದರಾಬಾದ್‌ನಲ್ಲಿದ್ದ ಅಪ್ಪನಿಗೆ ಮಕ್ಕಳು ಅಮ್ಮ ಕಾಣೆಯಾಗಿರುವ ವಿಚಾರ ತಿಳಿಸಿದ್ದಾರೆ. ಹೀಗಾಗಿ ತಾಯಿಯ ಅಂತ್ಯಸಂಸ್ಕಾರಕ್ಕೆ ಬಂದ ಮಗ ವಾಪಸ್‌ ಲಂಡನ್‌ಗೆ ತೆರಳಿದ್ದಾರೆ. ಅಲ್ಲದೇ ಪತ್ನಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಆಕೆ, ತನ್ನನ್ನು ಕ್ಯಾಬ್ ಡ್ರೈವರ್ ಓರ್ವ ಹೈದರಾಬಾದ್‌ನಲ್ಲಿ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಆಕೆ ಗಂಡನ ದಾರಿ ತಪ್ಪಿಸಿದ್ದಾಳೆ. ಇದನ್ನೇ ನಿಜವೆಂದು ನಂಬಿದ ಪತಿ ಆಕೆಗೆ ಜಾಗೃತವಾಗಿರುವಂತೆ ಧೈರ್ಯ ತುಂಬಿದ್ದು,  ನಾನು ಮುಂದಿನ ಫ್ಲೈಟ್‌ನಲ್ಲಿ ಹೈದರಾಬಾದ್‌ಗೆ ಬರುವುದಾಗಿ ತಿಳಿಸಿದ್ದಾರೆ. ಆದರೆ ಇದಾದ ನಂತರ ಅವರು ಮತ್ತೆ ಪತ್ನಿಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. 

ಇದೆಲ್ಲದರ ನಂತರವೂ ಪತಿ ಮುಂದೆ ಕಿಡ್ನ್ಯಾಪ್ ನಾಟಕ ಮುಂದುವರೆಸಿದ ಪತ್ನಿ, ಆತನಿಗೆ ತನ್ನನ್ನು ರಕ್ಷಣೆ ಮಾಡುವಂತೆ ವೀಡಿಯೋ ಮಾಡಿ ಕಳುಹಿಸಿದ್ದಾಳೆ. ಬರೀ ಇಷ್ಟೇ ಅಲ್ಲ, ನಾನು ಯಾವುದೋ ಅಪರಿಚಿತ ಪ್ರದೇಶದಲ್ಲಿ ಇರುವೆ, ನಾನು ಎಲ್ಲಿ ಇರುವೆ ಎಂಬುದು ನನಗೆ ಗೊತ್ತಿಲ್ಲ ಎಂದು ಪತಿಗೆ ಹೇಳಿದ್ದಾಳೆ. ಇದಾದ ನಂತರ ಪತಿ ಸೈಬರಾಬಾದ್ ಪೊಲೀಸ್ ಕಮೀಷನರ್‌ಗೆ ಇಮೇಲ್ ಮಾಡಿದ್ದು, ನಂತರ ಏರ್‌ಪೋರ್ಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅವರಿಬ್ಬರು(ಕ್ಯಾಬ್ ಚಾಲಕ ಹಾಗೂ ಮಹಿಳೆ) ಗೋವಾ ಟ್ರಿಪ್ ಮುಗಿಸಿ ವಾಪಸ್ ಬರುತ್ತಿರುವಾಗ ನಮಗೆ ಸಿಕ್ಕಿದ್ದಾರೆ. ಈ ವೇಳೆ ಆಕೆ ನಾನು ಕಿಡ್ಯಾಪ್ ಆಗಿಲ್ಲ, ನನ್ನ ಇಷ್ಟದಂತೆ ಗೋವಾಗೆ ಹೋಗಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಆರ್‌ಜಿಐ ಏರ್‌ಪೋರ್ಟ್ ಪೊಲೀಸ್ ಠಾಣೆಯ ಅಧಿಕಾರಿ ಕೆ ಬಾಲರಾಜು ಹೇಳಿದ್ದಾರೆ. ನಂತರ ಇಬ್ಬರಿಗೂ ಬುದ್ದಿ ಹೇಳಿ ನಂತರ ಆಕೆಯನ್ನು ಮರುದಿನವೇ ಲಂಡನ್‌ಗೆ ಕಳುಹಿಸಲಾಗಿದೆ. ಅಲ್ಲದೇ ಮಹಿಳೆ ತನ್ನಿಷ್ಟದಂತೆ ಗೋವಾಗೆ ಹೋದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನಿಗೂ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios