"

ನವದೆಹಲಿ[ನ.17]: ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಗೌತಮ್ ಗಂಭೀರ್ ನಾಪತ್ತೆಯಾಗಿದ್ದಾರೆ, ಇಡೀ ದೆಹಲಿ ಇವರಿಗಾಗಿ ಹುಡುಕಾಟ ನಡೆಸುತ್ತಿದೆ ಎಂಬ ಮಿಸ್ಸಿಂಗ್ ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯ ಮೂಲೆ ಮೂಲೆಯಲ್ಲೂ ಕಾಣಲಾರಂಭಿಸಿವೆ. 

ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

ಹೌದು ದೆಹಲಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಿರುವಾಗ ಸಂಸತ್ತಿನ ನಗರಾಭಿವೃದ್ದಿ ಸಮಿತಿ ಮಾಲಿನ್ಯ ನಿಯಂತ್ರಣದ ಕುರಿತು ಮಹತ್ವದ ಮೀಟಿಂಗ್  ಕರೆದಿತ್ತು. ಪೂರ್ವ ದೆಹಲಿ ಕ್ಷೇತ್ರದಿಂದ ಆಯ್ಕೆಯಾಗಿರುವ ಗೌತಮ್ ಗಂಭೀರ್ ಕೂಡ ಈ ಸಭೆಗೆ ಹಾಜರಾಗಬೇಕಿತ್ತು. ಆದರೆ ಗಂಭೀರ್ ಮೀಟಿಂಗ್ ಹಾಜರಾಗದೇ, ಇಂದೋರ್‌ನಲ್ಲಿ ನಡೆಯುಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೀಕ್ಷಕ ವಿವರಣೆಗೆ ತೆರಳಿದ್ದರು. ಇಲ್ಲಿ ಜಿಲೇಬಿ ತಿನ್ನುತ್ತಾ ಕಮೆಂಟ್ರಿ ನೀಡುತ್ತಿದ್ದ ಫೋಟೋಗಳು ವೈರಲ್ ಆಗಿದ್ದು, ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. 

ಈ ಪ್ರಸಂಗದ ಬೆನ್ನಲ್ಲೇ ಇದೀಗ ದೆಹಲಿಯ ಗಲ್ಲಿ ಗಲ್ಲಿಯಲ್ಲೂ ಗೌತಮ್ ಗಂಭೀರ್ ನಾಪತ್ತೆಯಾಗಿದ್ದಾರೆಂಬ ಪೋಸ್ಟರ್ಸ್ ಅಂಟಿಸಲಾಗಿದೆ. 'ನೀವೇನಾದರೂ ಇವರನ್ನು ನೋಡಿದ್ದೀರಾ? ಕೊನೆಯ ಬಾರಿ ಇಂದೋರ್‌ನಲ್ಲಿ ಜಿಲೇನಿ ತಿನ್ನುತ್ತಿರುವಾಗ ಕಂಡು ಬಂದಿದ್ದರು. ಇಡೀ ದೆಹಲಿ ಇವರನ್ನು ಹುಡುಕುತ್ತಿದೆ' ಎಂದು ಈ ಪೋಸ್ಟರ್‌ನಲ್ಲಿ ಬರೆಯಲಾಗಿದೆ.

ದೆಹಲಿಯ ಜನನಿಬಿಡ ಪ್ರದೇಶಗಳು, ಮರಗಳು ಸೇರಿದಂತೆ ಗಲ್ಲಿ ಗಲ್ಲಿಗಳಲ್ಲೂ ಈ ಪೋಸ್ಟರ್ಸ್ ಕಂಡು ಬಂದಿವೆ. ಇನ್ನಾದರೂ ಗೌತಮ್ ಗಂಭೀರ್ ಪ್ರತ್ಯಕ್ಷರಾಗ್ತಾರಾ? ಕಾದು ನೋಡಬೇಕಷ್ಟೇ.