ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಸಚಿವ ಜೈನ್‌ರನ್ನು ನೇರವಾಗಿ ಸಂಪರ್ಕಿಸಲು ಆಗಿಲ್ಲ. ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಬಳಿಕೆ ಮತ್ತೆ ಇ.ಡಿ ವಶಕ್ಕೆ ಮರಳಿದ್ದಾರೆ’ ಎಂದರು.
ನವದೆಹಲಿ(ಜೂ.11): ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ ವಶದಲ್ಲಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮುಖಕ್ಕೆ ಗಾಯಗೊಂಡಿರುವ ಫೋಟೋವೊಂದು ವೈರಲ್ ಆಗಿದೆ. ಸಚಿವ ಜೈನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಇ.ಡಿ. ಕಸ್ಟಡಿಗೆ ಮರಳಿದ್ದಾರೆ. ಆದರೆ ಗಾಯಗೊಂಡ ಈ ಚಿತ್ರ ನಾನಾ ಊಹಾಪೋಹಕ್ಕೆ ನಾಂದಿ ಹಾಡಿದೆ.
ಈ ಕುರಿತು ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಸಚಿವ ಜೈನ್‌ರನ್ನು ನೇರವಾಗಿ ಸಂಪರ್ಕಿಸಲು ಆಗಿಲ್ಲ. ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಬಳಿಕೆ ಮತ್ತೆ ಇ.ಡಿ ವಶಕ್ಕೆ ಮರಳಿದ್ದಾರೆ’ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ಜೈನ್ ಫೋಟೋ ವೈರಲ್ ಆಗುತ್ತಿದ್ದಂತೆ ಆಪ್ ಮುಖಂಡರು ಸಾಮಾಜಿಕ ಮಾಧ್ಯಮಗಳಲ್ಲಿ ಕಮೆಂಟ್‌ಗಳಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ.
ದಿಲ್ಲಿ ಸಚಿವ ಜೈನ್, ಆಪ್ತನ ಮನೇಲಿ 3 ಕೋಟಿ ನಗದು, 1.8 ಕೇಜಿ ಚಿನ್ನ ಜಪ್ತಿ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ಮತ್ತು ಅವರ ಆಪ್ತರಿಗೆ ಸೇರಿದ ಆಸ್ತಿಗಳ ಮೇಲೆ ಸೋಮವಾರ ನಡೆಸಿದ ದಾಳಿ ವೇಳೆ 2.85 ಕೋಟಿ ರು. ನಗದು ಮತ್ತು 1.8 ಕೇಜಿ ಪತ್ತೆಯಾಗಿದ್ದು, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಂಗಳವಾರ ಮಾಹಿತಿ ನೀಡಿದೆ.
ಸೋಮವಾರ ಸಚಿವರು ಮತ್ತು ಅವರ ಆಪ್ತರಿಗೆ ಸೇರಿದ 7 ಪ್ರದೇಶಗಳ ಮೇಲೆ ಇ.ಡಿ. ದಾಳಿ ನಡೆಸಿತ್ತು. ರಾಮ್ ಪ್ರಕಾಶ್ ಜ್ಯುವೆಲರಿ ಲಿ.ಗೆ ಸೇರಿದ ಪ್ರದೇಶದಲ್ಲಿ 2.85 ಕೋಟಿ ರು. ನಗದು ಮತ್ತು 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲವೂ ಅಕ್ರಮ ಸಂಪಾದನೆಯಾಗಿದ್ದು, ರಹಸ್ಯ ಸ್ಥಳದಲ್ಲಿ ಇಡಲಾಗಿತ್ತು. ಇದರೊಂದಿಗೆ ಆಪಾದನೆಗೊಳಪಡುವ ದಾಖಲೆಗಳು ಮತ್ತು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ತಿಳಿಸಿದೆ.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮೇ 30ರಂದು ಜಾರಿ ನಿರ್ದೇಶನಾಲಯ ಜೈನ್ ಅವರನ್ನು ಬಂಧಿಸಿತ್ತು. ವಿಚಾರಣೆಯ ನಂತರ ಮತ್ತಷ್ಟುದಾಖಲೆಗಳ ಸಂಗ್ರಹಕ್ಕಾಗಿ ಸೋಮವಾರ ಜೈನ್ ಅವರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿತ್ತು.
ಈ ದಾಳಿಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಧಾನಿ ಮೋದಿ ಅವರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಎಲ್ಲಾ ತನಿಖಾ ಸಂಸ್ಥೆಗಳನ್ನು ತಮ್ಮ ಅಧೀನದಲ್ಲಿ ಹೊಂದಿರಬಹುದು, ಆದರೆ ದೇವರು ನಮ್ಮ ಜೊತೆಗಿದ್ದಾನೆ ಎಂದು ಹೇಳಿದ್ದಾರೆ.
