* 12 ತಾಸು ಸತತ ವಿಚಾರಣೆ ಬಳಿಕ ಅಜಯ್‌ ಮಿಶ್ರಾ ಮಗನ ಬಂಧನ* 4 ರೈತರ ಬಲಿ ಪಡೆದ ಲಖೀಂಪುರ ಪ್ರಕರಣ* ಕಡೆಗೂ ಆಶಿಷ್‌ ವಿಚಾರಣೆಗೆ ಹಾಜರು* ಘಟನೆ ವೇಳೆ ಎಲ್ಲಿದ್ದೆ? ಎಂಬ ಪೊಲೀಸ್‌ ಪ್ರಶ್ನೆಗೆ ಹಾರಿಕೆ ಉತ್ತರ

ಲಖೀಂಪುರ ಖೇರಿ(ಅ.10): ನಾಲ್ವರು ರೈತರು ಸೇರಿ 8 ಮಂದಿ ಸಾವಿಗೆ ಕಾರಣವಾಗಿರುವ ಲಖೀಂಪುರ ಹಿಂಸಾಚಾರಕ್ಕೆ(Lakhimpur Kheri) ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌(Supreme Court) ಚಾಟಿ ಬೀಸಿದ ಬೆನ್ನಲ್ಲೇ, ಈ ಪ್ರಕರಣದ ಪ್ರಮುಖ ಆರೋಪಿಯಾದ ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ(Ajay Kumar Mishra) ಅವರ ಪುತ್ರ ಆಶಿಷ್‌ ಮಿಶ್ರಾನನ್ನು(Ashish Mishra) ಶನಿ​ವಾರ ತಡ​ರಾತ್ರಿ ಬಂಧಿ​ಸ​ಲಾ​ಗಿ​ದೆ.

‘ಘಟ​ನೆ​ಯಲ್ಲಿ ತಮ್ಮ ಪಾತ್ರ​ವಿಲ್ಲ ಎಂದು ಕೆಲ​ವು ದಾಖ​ಲೆ​ಗ​ಳೊಂದಿಗೆ ಅವರು 12 ತಾಸಿನ ವಿಚಾ​ರಣೆ ವೇಳೆ ಸ್ಪಷ್ಟನೆ ನೀಡಲು ಯತ್ನಿ​ಸಿ​ದ​ರು. ಆದರೆ ಪೊಲೀ​ಸರ ಕೆಲ ಪ್ರಶ್ನೆ​ಗ​ಳಿ​ಗೆ ಉತ್ತರ ನೀಡಲು ವಿಫ​ಲರಾಗಿ ಅಸ​ಹ​ಕಾರ ತೋರಿದ​ರು. ಹೀಗಾಗಿ ಅವ​ರನ್ನು ಬಂಧಿ​ಸ​ಲಾ​ಯಿತು. ಅವ​ರನ್ನು ಕೋರ್ಟ್‌ಗೆ ಹಾಜ​ರು​ಪ​ಡಿ​ಸಿ ಮತ್ತೆ ವಶಕ್ಕೆ ಪಡೆದು ಹೆಚ್ಚಿನ ವಿಚಾ​ರಣೆ ನಡೆ​ಸು​ತ್ತೇ​ವೆ’ ಎಂದು ಸಹಾ​ರ​ನ್‌​ಪುರ ಡಿಐಜಿ ಉಪೇಂದ್ರ ಅಗ​ರ್‌​ವಾಲ್‌ ತಿಳಿ​ಸಿ​ದ್ದಾ​ರೆ. ಮೂಲ​ಗಳ ಪ್ರಕಾರ, ಘಟನೆ ನಡೆದ ಅ.3ರ ಮಧ್ಯಾಹ್ನ 2.30ರಿಂದ 3.30ರ ನಡುವೆ ತಾನು ಎಲ್ಲಿ ಇದ್ದೆ ಎಂಬು​ದನ್ನು ಹೇಳಲು ಆಶಿಷ್‌ ವಿಫ​ಲ​ರಾ​ದರು. ಇದೇ ಅವರ ಬಂಧ​ನಕ್ಕೆ ಕಾರ​ಣ​ವಾ​ಯಿತು.

ಇದ​ರೊಂದಿಗೆ ಆಶಿಷ್‌ ಬಂಧ​ನ ಆಗ​ಲೇ​ಬೇಕು ಎಂದು ಪಟ್ಟು ಹಿಡಿ​ದಿದ್ದ ರೈತ ಸಂಘ​ಟ​ನೆ​ಗಳು(Farmer Unions) ಹಾಗೂ ವಿಪ​ಕ್ಷ​ಗಳ ಪ್ರಮುಖ ಬೇಡಿಕೆ ಈಡೇ​ರಿ​ದಂತಾ​ಗಿದೆ. ಜತೆಗೆ, ಪ್ರಕ​ರ​ಣ​ದಲ್ಲಿ ಬಂಧಿ​ತರ ಸಂಖ್ಯೆ 3ಕ್ಕೇರಿ​ದೆ. ಈ ಮುನ್ನ ಇಬ್ಬರು ಆಶಿಷ್‌ ಆಪ್ತ​ರನ್ನು ಬಂಧಿ​ಸ​ಲಾ​ಗಿ​ತ್ತು.

ಶುಕ್ರ​ವಾರ ವಿಚಾ​ರ​ಣೆಗೆ ಆಶಿ​ಷ್‌​ರನ್ನು ಕರೆ​ದಿ​ತ್ತಾ​ದ​ರೂ ಅವರು ಬಂದಿ​ರ​ಲಿಲ್ಲ. ಆದರೆ, ಘಟನೆ ನಡೆದು ಸುಮಾರು 1 ವಾರದ ಬಳಿಕ ಶನಿ​ವಾರ ಬೆಳಗ್ಗೆ 10.30ಕ್ಕೆ ಲಖೀಂಪುರ ಕ್ರೈಮ್‌ ಬ್ರಾಂಚ್‌ ಪೊಲೀಸರೆದುರು(Lakhimpur Crime Branch Police) ಆಶಿಷ್‌ ಹಾಜ​ರಾ​ದ​ರು. ಡಿಐಜಿ ಅಗರ್‌ವಾಲ್‌ ನೇತೃತ್ವದ 11 ಜನರ ಎಸ್‌ಐಟಿ ತಂಡ ತಡ​ರಾತ್ರಿ 11ರವ​ರೆಗೆ ವಿಚಾ​ರಣೆ ನಡೆ​ಸಿ​ತು.

ಮಿಶ್ರಾ ಹೇಳಿಕೆಯೇನು?:

ವಿಚಾ​ರಣೆ ವೇಳೆ ಆಶಿಷ್‌ ಮಿಶ್ರಾ, ‘ಅ.3ರಂದು ಲಖೀಂಪುರ ಸನಿಹ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರು ನಾವು ಆಯೋ​ಜಿ​ಸಿದ್ದ ಸಮಾ​ರಂಭಕ್ಕೆ ಬರು​ತ್ತಿ​ದ್ದ​ರು. ನಾನು ಸಮಾ​ರಂಭ​ದಲ್ಲಿ ಇದ್ದ ಕಾರಣ, ಮೌರ್ಯ ಅವ​ರನ್ನು ಕರೆ​ತ​ರಲು ನಮ್ಮ ಬೆಂಬ​ಲಿಗ ಕಾರ್ಯ​ಕ​ರ್ತರು ನಮ್ಮದೇ ಕಾರಿ​ನಲ್ಲಿ ಹೋಗಿ​ದ್ದರು. ಆಗ ರೈತರು ನಮ್ಮ ಕಾರಿನ ಮೇಲೆ ದಾಳಿ ನಡೆ​ಸಿ​ದರು. ಈ ವೇಳೆ ರೈತ​ರನ್ನು ನಮ್ಮ ಕಾರು ಗುದ್ದಿ​ಕೊಂಡು ಹೋಗಿದೆ. ಕಾರಿ​ನಲ್ಲಿ ನಾನು ಇರ​ಲಿಲ್ಲ. ಅದೇ ವೇಳೆ ನನ್ನ ಗ್ರಾಮದಲ್ಲಿ ಸಮಾ​ರಂಭ ನಡೆ​ಯು​ತ್ತಿತ್ತು ಹಾಗೂ ನಾನು ಕುಸ್ತಿ ನಡೆಯುತ್ತಿದ್ದ ಸ್ಥಳದಲ್ಲಿದ್ದೆ. ಹೀಗಾಗಿ ರೈತರ ಹಿಂಸಾಚಾರ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾನೆ ಎಂದು ಮೂಲ​ಗಳು ಹೇಳಿ​ವೆ.

ಇದಕ್ಕೆ ಪೂರ​ಕ​ವಾಗಿ ವಿಡಿಯೋಗಳು ಮತ್ತು 10 ಮಂದಿಯ ಅಫಿಡವಿಟ್‌ಗಳನ್ನು ತನಿಖಾಧಿಕಾರಿಗಳಿಗೆ ಆಶಿಷ್‌ ಸಾಕ್ಷ್ಯಗಳನ್ನಾಗಿ ನೀಡಿದ್ದಾನೆ ಎನ್ನಲಾಗಿದೆ. ಆದಾಗ್ಯೂ ಪೊಲೀ​ಸರು ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿ​ದಾಗ ಉತ್ತ​ರಿ​ಸಲು ವಿಫ​ಲ​ರಾಗಿ ತನಿ​ಖೆಗೆ ಅಸ​ಹ​ಕಾರ ತೋರಿದ್ದಾನೆ. ಅವನ ಮೊಬೈಲ್‌ ಅನ್ನು ವಶಕ್ಕೆ ತೆಗೆ​ದುಕೊಳ್ಳಲಾ​ಗಿದೆ ಎಂದು ಪೊಲೀ​ಸರು ಹೇಳಿದ್ದಾರೆ.

ತನಿಖೆಗೆ ಅಸಹಕಾರ ನಾನು ಇರಲೇ ಇಲ್ಲ!

1. ಅ.3ಕ್ಕೆ ಲಖೀಂಪುರ ಸಮೀಪ ಕಾರ್ಯಕ್ರಮ ಒಂದನ್ನು ಆಯೋಜಿಸಿದ್ದೆವು

2. ಅದಕ್ಕೆ ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಬರುವವರಿದ್ದರು

3. ನಾನು ಸಮಾರಂಭದಲ್ಲಿದ್ದ ಕಾರಣ ಬೆಂಬಲಿಗರು ನಮ್ಮ ಕಾರಲ್ಲಿ ಹೋಗಿದ್ದರು

4. ನಮ್ಮ ಕಾರಿಗೆ ರೈತರು ದಾಳಿ ನಡೆಸಿದಾಗ ಅವರನ್ನು ಗುದ್ದಿಕೊಂಡು ಹೋಗಿದೆ

5. ನಾನು ನನ್ನ ಗ್ರಾಮದಲ್ಲಿದ್ದೆ. ಘಟನೆಗೂ, ನನಗೂ ಸಂಬಂಧವಿಲ್ಲ: ಸಚಿವರ ಪುತ್ರ