* ಹಾಲಿ ಕೇಂದ್ರ ಸಚಿವ ಅರೆಸ್ಟ್, 20 ವರ್ಷಗಳಲ್ಲಿ ಇದೇ ಮೊದಲು* ಉದ್ಧ​ವ್‌ಗೆ ಹೊಡೀ​ತಿದ್ದೆ ಎಂದ ಕೇಂದ್ರ ಸಚಿವ ಬಂಧ​ನ* ತಡ​ರಾತ್ರಿ ಕೋರ್ಟ್‌​ನಿಂದ ಜಾಮೀ​ನು

ಮುಂಬೈ(ಆ.25): ‘ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದ ಮಾಹಿತಿ ಇಲ್ಲದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಕಪಾಳಮೋಕ್ಷ ಮಾಡುತ್ತಿದ್ದೆ’ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಮಂಗಳವಾರ ಮಧ್ಯಾ​ಹ್ನ ಬಂಧಿಸಿದ್ದಾರೆ. ಆದರೆ ತಡ​ರಾತ್ರಿ ರಾಣೆ ಅವ​ರಿಗೆ ಜಾಮೀನು ಲಭಿ​ಸಿ​ದೆ.

ಅಧಿಕಾರದಲ್ಲಿದ್ದಾಗ ಕೇಂದ್ರ ಸಚಿವರೊಬ್ಬರ ಬಂಧನ 20 ವರ್ಷದಲ್ಲೇ ಮೊದಲ ಬಾರಿ ನಡೆದಿದ್ದು, ಮಾಜಿ ಮಿತ್ರರಾದ ಬಿಜೆಪಿ ಮತ್ತು ಶಿವಸೇನೆ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೂ ನಾಂದಿ ಹಾಡಿದೆ.

ಮತ್ತೊಂದೆಡೆ ರಾಣೆ ಹೇಳಿಕೆ ಮತ್ತು ಬಂಧನ ವಿರೋಧಿಸಿ ಮುಂಬೈ ಸೇರಿದಂತೆ ರಾಜ್ಯದ ಹಲವೆಡೆ ಬಿಜೆಪಿ ಮತ್ತು ಶಿವಸೇನೆ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಬಿಜೆಪಿ ಕಚೇರಿಗಳ ಮೇಲೆ ದಾಳಿಗಳೂ ನಡೆದಿವೆ.

ಈ ನಡುವೆ ರಾಣೆ ಅವರ ವಿವಾದಿತ ಹೇಳಿಕೆಯನ್ನು ಪುರಸ್ಕರಿಸುವುದರಿಂದ ರಾಜ್ಯ ಬಿಜೆಪಿ ನಾಯಕರು ಹಿಂದೆ ಸರಿದಿದ್ದರೂ, ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಅನೇಕರು ರಾಣೆ ಬಂಧನವನ್ನು ಉಗ್ರವಾಗಿ ಖಂಡಿಸಿದ್ದಾರೆ. ರಾಣೆಗೆ ಪೂರ್ಣ ಬೆಂಬಲ ಪ್ರಕಟಿಸಿದ್ದಾರೆ. ಇನ್ನೊಂದೆಡೆ ರಾಣೆಗೆ ಜಾಮೀ​ನು ಸಿಕ್ಕ ಬಳಿಕ ಪ್ರತಿ​ಕ್ರಿ​ಯಿ​ಸಿ​ರುವ ಶಿವ​ಸೇನೆ ಮೂಲ​ಗಳು, ‘ರಾಣೆ ವಿರುದ್ಧ ಪ್ರಕ​ರಣ ಮುಂದು​ವ​ರಿ​ಸುವ ಆಸ​ಕ್ತಿ ಇಲ್ಲ. ಕಾನೂ​ನಿ​ಗಿಂತ ಯಾರೂ ಮಿಗಿ​ಲಲ್ಲ ಎಂದು ಸಾಬೀ​ತು​ಪ​ಡಿ​ಸು​ವುದೇ ಬಂಧ​ನದ ಉದ್ದೇಶ ಆಗಿ​ತ್ತು’ ಎಂದಿ​ವೆ.

ಏನಾಯ್ತು?:

ಸೋಮವಾರ ರತ್ನಗಿರಿ ಜಿಲ್ಲೆಯಲ್ಲಿ ಜನಾಶೀರ್ವಾದ ರಾರ‍ಯಲಿಯಲ್ಲಿ ಭಾಗಿಯಾಗಿ ಮಾತನಾಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ‘ಮಹಾರಾಷ್ಟ್ರದ ಮುಖ್ಯಮಂತ್ರಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷ ಗೊತ್ತಿಲ್ಲವೆಂಬುದು ನಾಚಿಕೆಗೇಡಿನ ವಿಷಯ. ಆ.15ರಂದು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಸಿಎಂ ಉದ್ಧವ್‌ ಠಾಕ್ರೆಗೆ ಸ್ವಾತಂತ್ರ್ಯ ಬಂದ ವರ್ಷ ಖಚಿತವಾಗದೆ ಭಾಷಣದ ಮಧ್ಯದಲ್ಲೇ ತಮ್ಮ ಆಪ್ತರನ್ನು ಕೇಳಿ ಖಚಿತಪಡಿಸಿಕೊಂಡರು. ಒಂದು ವೇಳೆ ನಾನೇನಾದರೂ ಸ್ಥಳದಲ್ಲಿ ಇದ್ದಿದ್ದರೆ ಅವರ ಕಪಾಳಕ್ಕೆ ಬಲವಾಗಿ ಬಿಗಿಯುತ್ತಿದ್ದೆ’ ಎಂದು ವಿವಾದಿತ ಹೇಳಿಕೆ ನೀಡಿದ್ದರು.

ಈ ಹೇಳಿಕೆ ವಿರುದ್ಧ ಸೋಮವಾರವೇ ರಾಜ್ಯದ ಹಲವೆಡೆ ಶಿವಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಅವರ ಬಂಧನಕ್ಕೆ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ನಾಸಿಕ್‌ನಲ್ಲಿ ರಾಣೆ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ರಾಣೆ ಬಂಧನಕ್ಕೆ ನಾಸಿಕ್‌ನ ಜಿಲ್ಲಾ ಪೊಲೀಸ್‌ ವರಿಷ್ಠ ದೀಪಕ್‌ ಪಾಂಡೆ ಆದೇಶಿಸಿದ್ದರು. ಇದರ ನಡುವೆ, ರಾಣೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರೂ ಅದಕ್ಕೆ ಪುರಸ್ಕಾರ ಸಿಗಲಿಲ್ಲ.

ಈ ಹಿನ್ನೆಲೆಯಲ್ಲಿ ಮಂಗಳವಾರ ರಾಣೆ ಅವರು ರತ್ನಗಿರಿ ಜಿಲ್ಲೆಯಲ್ಲಿ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆಯೇ ಆಗಮಿಸಿದ ಪೊಲೀಸರು ಅವರನ್ನು ಬಂಧಿಸಿ ಸಂಗ​ಮೇ​ಶ್ವರ ಠಾಣೆಗೆ ಕರೆ​ದೊ​ಯ್ದ​ರು.

ಬಳಿಕ ರಾತ್ರಿ ಅವ​ರನ್ನು ಮಹಾಡ್‌ ಕೋರ್ಟ್‌ಗೆ ಹಾಜ​ರುಪಡಿ​ಸ​ಲಾ​ಯಿತು. ಆಗ ಪೊಲೀ​ಸರು ರಾಣೆ ಅವರ 7 ದಿನದ ಕಸ್ಟಡಿ ಕೇಳಿ​ದರು. ರಾಣೆ ಅವರು ಅನಾ​ರೋ​ಗ್ಯದ ಕಾರಣ ನೀಡಿ ಜಾಮೀನು ಕೇಳಿ​ದರು. ಕೊನೆಗೆ ಕೋರ್ಟು ಜಾಮೀನು ನೀಡಿ​ತು.

ಹೇಳಿಕೆ ಬಗ್ಗೆ ರಾಣೆ ಸಮರ್ಥನೆ:

ಬಂಧನದ ಮಾಧ್ಯಮಗಳಿಗೆ ರಾಣೆ ಪ್ರತಿಕ್ರಿಯಿಸಿ, ‘ನನಗೆ ಯಾವುದೇ ಪಶ್ಚಾತ್ತಾಪವಿಲ್ಲ’ ಎಂದಿದ್ದಾರೆ.