* ದೇಶದ್ರೋಹ ಕಾಯ್ದೆಗೆ ತಡೆ ಬಗ್ಗೆ ಸಚಿವರ ಪ್ರತಿಕ್ರಿಯೆ* ಲಕ್ಷ್ಮಣ ರೇಖೆ ಮೀರಬಾರದು: ಕಿರಣ್ ರಿಜಿಜು* ಅಸಮಾಧಾನ ವ್ಯಕ್ತಪಡಿಸಿದರೇ ಕಾನೂನು ಸಚಿವ?
ನವದೆಹಲಿ(ಮೇ.12): ದೇಶದ್ರೋಹ ಕಾಯ್ದೆಗೆ ತಡೆ ನೀಡಿರುವ ಸುಪ್ರೀಂ ಕೋರ್ಚ್ ಆದೇಶದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೇಂದ್ರ ಕಾನೂನು ಖಾತೆ ಸಚಿವ ಕಿರಣ್ ರಿಜಿಜು ‘ನ್ಯಾಯಾಂಗವಾಗಲೀ ಅಥವಾ ಕಾರ್ಯಾಂಗವಾಗಲೀ ಲಕ್ಷ್ಮಣ ರೇಖೆ ಮೀರಬಾರದು’ ಎಂಬ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾವು ಪರಸ್ಪರರನ್ನು ಗೌರವಿಸುತ್ತೇವೆ. ನ್ಯಾಯಾಂಗ ಸರ್ಕಾರವನ್ನು ಗೌರವಿಸಬೇಕು. ಅದೇ ರೀತಿ ಸರ್ಕಾರ ಕೂಡಾ ನ್ಯಾಯಾಲಯಗಳನ್ನು ಗೌರವಿಸಬೇಕು. ನಾವು ನಮ್ಮ ಗಡಿಯ ಬಗ್ಗೆ ಸ್ಪಷ್ಟವಾದ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡಿದ್ದೇವೆ. ಅದನ್ನು ಯಾರೂ ದಾಟಬಾರದು’ ಎಂದರು. ಈ ಮೂಲಕ ಕಾಯ್ದೆ ವಿಷಯದಲ್ಲಿ ಸುಪ್ರೀಂಕೋರ್ಚ್ ನಿರ್ಧಾರಕ್ಕೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.
ದೇಶದ್ರೋಹ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರಿಟಿಷ್ ಕಾಲ ಕಾಯ್ದೆಯಾದ ‘ದೇಶದ್ರೋಹ ಕಾಯ್ದೆ’ಗೆ ಸುಪ್ರೀಂ ಕೋರ್ಚ್ ಬುಧವಾರ ತಡೆ ನೀಡಿದೆ. ‘ದೇಶಾದ್ಯಂತ ವಿವಿಧ ವ್ಯಕ್ತಿಗಳ ಮೇಲೆ ಈಗಾಗಲೇ ದಾಖಲಾಗಿರುವ ದೇಶದ್ರೋಹ ಪ್ರಕರಣದ ವಿಚಾರಣೆಗೆ ತಡೆ ನೀಡಬೇಕು ಹಾಗೂ ಮುಂದಿನ ಆದೇಶದವರೆಗೆ ದೇಶದ್ರೋಹದ ಕಾಯ್ದೆಯಡಿ ಹೊಸ ಎಫ್‌ಐಆರ್ ದಾಖಲಿಸಕೂಡದು’ ಎಂದು ಅದು ಆದೇಶ ಹೊರಡಿಸಿದೆ.
ತೀವ್ರ ಪ್ರಮಾಣದಲ್ಲಿ ದುರ್ಬಳಕೆ ಆಗುತ್ತಿದೆ ಎಂಬ ಟೀಕೆಗೆ ಗುರಿಯಾಗಿರುವ ದೇಶದ್ರೋಹ ಕಾಯ್ದೆ ಬಗ್ಗೆ ಸೂಕ್ತ ವೇದಿಕೆ ಮೂಲಕ ನಿಷ್ಕರ್ಷೆಗೆ ಸಿದ್ಧ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ ಬೆನ್ನಲ್ಲೇ ಸುಪ್ರೀಂಕೋರ್ಚ್ ಈ ನಿರ್ಧಾರ ಪ್ರಕಟಿಸಿದೆ.
ಮಂಗಳವಾರದ ವಿಚಾರಣೆ ವೇಳೆ, ‘ದೇಶದ್ರೋಹ ಕಾಯ್ದೆ ಅಡಿ (ಐಪಿಸಿ 124ಎ) ಮರುಪರಿಶೀಲನೆ ಮಾಡುವುದಾಗಿ ಹೇಳಿದ್ದೀರಿ. ಹೀಗಿದ್ದಾಗಿ ಈಗಾಗಲೇ ದಾಖಲಾಗಿ ವಿಚಾರಣೆ ನಡೆಯುತ್ತಿರುವ ಪ್ರಕರಣ ಮತ್ತು ಹೊಸದಾಗಿ ಭವಿಷ್ಯದಲ್ಲಿ ದಾಖಲಾಗಬಹುದಾದ ಕೇಸುಗಳ ಕಥೆ ಏನು ಎಂಬುದರ ಬಗ್ಗೆ ಬುಧವಾರ ಅಭಿಪ್ರಾಯ ತಿಳಿಸಿ’ ಎಂದು ಸುಪ್ರೀಂಕೋರ್ಚ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಬುಧವಾರ ವಿಚಾರಣೆ ವೇಳೆ ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಏಕಪಕ್ಷೀಯವಾಗಿ ಕಾಯ್ದೆಗೆ ತಡೆ ನೀಡುವುದು ಸರಿಯಲ್ಲ. ಕಾರಣ ಅಕ್ರಮ ಹಣ ವರ್ಗಾವಣೆ, ಉಗ್ರ ಕೇಸಲ್ಲಿ ಬಂಧಿತರ ಮೇಲೆ ಇದೇ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ. ಪ್ರತಿ ಪ್ರಕರಣದ ತೀವ್ರತೆ ಕೇಂದ್ರದ ಅರಿವಿಗೆ ಬರುವುದಿಲ್ಲ. ಹೀಗಾಗಿ ಈ ವಿಷಯದಲ್ಲಿ ನಾವು ನ್ಯಾಯಾಲಯದ ತೀರ್ಮಾನದ ವೇಳೆ ವಿಶ್ವಾಸ ಇಡಬೇಕಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಕಾಯ್ದೆಗೆ ತಡೆ ನೀಡುವ ಬದಲು ಆರೋಪಿಗಳಿಗೆ ಬೇಕಿದ್ದರೆ ಜಾಮೀನು ನೀಡುವ ಪ್ರಕ್ರಿಯೆ ಚುರುಕುಗೊಳಿಸಬಹುದು’ ಎಂದು ವಾದಿಸಿದರು.
ಸರ್ಕಾರದ ಈ ಹೇಳಿಕೆ ಬಗ್ಗೆ ಕೆಲ ಕಾಲ ಚರ್ಚೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠ, ‘ದೇಶಾದ್ಯಂತ ಬಾಕಿಯಿರುವ ಎಲ್ಲಾ ದೇಶದ್ರೋಹ ಕೇಸು, ಮೇಲ್ಮನವಿ ಮತ್ತು ವಿಚಾರಣೆಗೆ ತಕ್ಷಣದಿಂದ ತಡೆ ನೀಡಲಾಗುತ್ತಿದೆ. ಜೊತೆಗೆ ಹೊಸದಾಗಿ ದೇಶದ್ರೋಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸುತ್ತಿದ್ದೇವೆ. ಈ ಬಗ್ಗೆ ಯಾರಿಗಾದರೂ ದೂರುಗಳಿದ್ದರೆ ಅವರು ಸೂಕ್ತ ನ್ಯಾಯಾಲಯದ ಮೊರೆ ಹೋಗಬಹುದು’ ಎಂದು ಹೇಳಿತು ಹಾಗೂ ವಿಚಾರಣೆಯನ್ನು ಜುಲೈ 2ನೇ ವಾರಕ್ಕೆ ಮುಂದೂಡಿತು.
