ನವದೆಹಲಿ(ಫೆ.21): ಸಾಮಾಜಿಕವಾಗಿ, ಆರ್ಥಿಕವಾಗಿ ಅಸಮಾನತೆ ಇರುವವರಿಗೆ ಮೀಸಲಾತಿ ಅಗತ್ಯವಾಗಿದ್ದು, ರಾಜಕೀಯ ಕಾರಣಕ್ಕೆ ಬಲಿತವರು ದಲಿತರ ಮೀಸಲಾತಿ ಕೇಳಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೀಸಲಾತಿ ಕೇಳುವುದು ಜೇನುಗೂಡಿಗೆ ಕೈ ಹಾಕಿದಂತೆ. ನಿಯಮಗಳಿಗೆ ಅನುಸಾರವಾಗಿ ಮೀಸಲಾತಿ ನೀಡಬೇಕಾಗುತ್ತದೆ ಎಂದರು.
ಅಭಿವೃದ್ಧಿ ಪ್ರಾಧಿಕಾರಗಳ ರಚನೆಯ ಕೂಗು ಹೆಚ್ಚಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಣ್ಣ ಜಾತಿಗಳ ಅಭಿವೃದ್ಧಿ ಪ್ರಾಧಿಕಾರ ಅಗತ್ಯ. ದೊಡ್ಡ ಸಮುದಾಯಗಳಿಗೆ ಪ್ರಾಧಿಕಾರದ ಅವಶ್ಯಕತೆ ಇರುವುದಿಲ್ಲ. ಕುರುಬ, ಲಿಂಗಾಯತ, ಒಕ್ಕಲಿಗರಿಗೆ ಪ್ರಾಧಿಕಾರದ ಅವಶ್ಯಕತೆ ಇಲ್ಲ. ಒಕ್ಕಲಿಗರಿಗೆ ಪ್ರಾಧಿಕಾರ ಮಾಡಿದರೆ, ಒಳ ಜಾತಿಗಳ ಕೂಗು ಏಳಲಿದೆ. ಪ್ರಾಧಿಕಾರ ರಚಿಸಿದರೆ ತಾತ್ಕಾಲಿಕ ಖುಷಿ ನೀಡಬಹುದು. ಆದರೆ, ದೂರಗಾಮಿ ಪರಿಣಾಮ ಬೀರಲಿದೆ ಎಂದು ಹೇಳಿದರು.

ರಾಮ ಮಂದಿರ ದೇಣಿಗೆ ದಂಗಲ್: ಕಿಡಿ ಹೊತ್ತಿಸಿದ ಎಚ್‌ಡಿಕೆಗೆ ಕೇಸರಿ ನಾಯಕರ ತಿರುಗೇಟು

ಪಿಎಫ್‌ಐ ವಿರುದ್ಧ ಆರ್‌ಎಸ್‌ಎಸ್‌ ಹೋರಾಟ:

ಆರ್‌ಎಸ್‌ಎಸ್‌ ಜಾತಿ ಅಸಮಾನತೆ ವಿರುದ್ಧ ಹೋರಾಟ ನಡೆಸುತ್ತಿದೆ. ಆರ್‌ಎಸ್‌ಎಸ್‌ ಅನ್ನು ಟಾರ್ಗೆಟ್‌ ಮಾಡಿದರೆ, ಭಾರತವನ್ನು ಟಾರ್ಗೆಟ್‌ ಮಾಡಿದಂತೆ. ಖಿಲ್ಜಿ, ಔರಂಗಜೇಬ್‌, ಮಲ್ಲಿಕಾಫರ್‌, ಲಾಡನ್‌ನ ಮನಸ್ಥಿತಿಯೇ ಪಿಎಫ್‌ಐನ ಮನಸ್ಥಿತಿ. ಪಿಎಫ್‌ಐ ಸಂಚು ತಡೆಯಲು ಆರ್‌ಎಸ್‌ಎಸ್‌ ಹೋರಾಟ ಮಾಡುತ್ತಿದೆ. ಪಿಎಫ್‌ಐ ಸಂಚನ್ನು ಎದುರಿಸುವ ಶಕ್ತಿ ಭಾರತಕ್ಕಿದೆ ಎಂದರು.