ದುರ್ಗಮ ಪ್ರದೇಶ, ವಲಸೆ, ಅನುಮಾನ ಲಸಿಕೆ ವಿಳಂಬಕ್ಕೆ ಕಾರಣ: ಈಶಾನ್ಯ ರಾಜ್ಯಗಳು!
* ಲಸಿಕೆ ನೀಡಿಕೆಯಲ್ಲಿ ಹಿಂದೆ ಬಿದ್ದಿರುವ ರಾಜ್ಯಗಳ ಮುಖ್ಯಮಂತ್ರಿಗಳೊಡನೆ ನ.3ರಂದು ಪ್ರಧಾನಿ ಮೋದಿ ಸಭೆ
* ದುರ್ಗಮ ಪ್ರದೇಶ, ವಲಸೆ, ಅನುಮಾನ ಲಸಿಕೆ ವಿಳಂಬಕ್ಕೆ ಕಾರಣ: ಈಶಾನ್ಯ ರಾಜ್ಯಗಳು
ನವದೆಹಲಿ(ನ,03): ಲಸಿಕೆ ನೀಡಿಕೆಯಲ್ಲಿ ಹಿಂದೆ ಬಿದ್ದಿರುವ ರಾಜ್ಯಗಳ ಮುಖ್ಯಮಂತ್ರಿಗಳೊಡನೆ ನ.3ರಂದು ಪ್ರಧಾನಿ ಮೋದಿ ಸಭೆ ಕರೆದಿರುವ ಬೆನ್ನಲ್ಲೇ, ಲಸಿಕೆ ನೀಡಿಕೆ ವಿಳಂಬವಾಗಿರುವುದಕ್ಕೆ ಕಾರಣವನ್ನು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ವಿವರಿಸಿದ್ದಾರೆ. ಕಷ್ಟವಾದ ಭೌಗೋಳಿಕ ಸನ್ನಿವೇಶಗಳು, ಜನರ ವಲಸೆ ಹಾಗೂ ಲಸಿಕೆಯ ಬಗ್ಗೆ ಜನರಿಗಿರುವ ಅನುಮಾನಗಳಿಂದಾಗಿ ಲಸಿಕೆ ನೀಡಿಕೆ ವಿಳಂಬವಾಗಿದೆ ಎಂದು ಹೇಳಿದ್ದಾರೆ.ದೇಶದಲ್ಲಿ ಲಸಿಕೆ ನೀಡಿಕೆಯಲ್ಲಿ ಹಿಂದೆ ಬಿದ್ದಿರುವ 49 ಜಿಲ್ಲೆಗಳಲ್ಲಿ 27 ಜಿಲ್ಲೆಗಳು ಈಶಾನ್ಯ ರಾಜ್ಯಗಳದ್ದೇ ಆಗಿವೆ. ‘ರಾಜ್ಯದ ಬಹುತೇಕ ಜನರು ರಾಜಧಾನಿ ಇಟಾನಗರ್‌ಗೆ ವಲಸೆ ಹೋಗಿದ್ದಾರೆ ಹಾಗಾಗಿ ಅವರನ್ನು ಗುರುತಿಸಿ ಲಸಿಕೆ ನೀಡುವುದು ಕಷ್ಟವಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿರುವ ಭೌಗೋಳಿಕ ಪ್ರದೇಶಗಳು ಕ್ಲಿಷ್ಟವಾಗಿರುವುದರಿಂದ ಲಸಿಕೆ ನೀಡಿಕೆಯು ಕಷ್ಟವಾಗುತ್ತಿದೆ’ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಹೇಳಿದ್ದಾರೆ.
ಮಣಿಪುರ ರಾಜ್ಯದಲ್ಲಿ 8 ಜಿಲ್ಲೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಲಸಿಕಾಕರಣವಾಗಿದೆ. ‘ನಾವು ಲಸಿಕಾಕರಣದ ವೇಗವನ್ನು ಹೆಚ್ಚಿಸಲು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಜನರು ಇರುವ ಸ್ಥಳಗಳಿಗೆ ಹೋಗಿ ಲಸಿಕೆ ನೀಡಲು ವಾಹನಗಳ ವ್ಯವಸ್ಥೆಯನ್ನು ಮಾಡಿದ್ದೇವೆ. ಆದರೆ ಕೆಲವು ಪ್ರದೇಶಗಳಿಗೆ ರಸ್ತೆಯ ಮೂಲಕ ಹೋಗಿ ಲಸಿಕೆ ನೀಡುವುದು ಅಸಾಧ್ಯ. ಜನರಿಗೆ ಇನ್ನೂ ಸಹ ಲಸಿಕೆಯ ಕುರಿತು ಅನುಮಾನಗಳಿವೆ. ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಲಸಿಕಾಕರಣ ವಿಳಂಬವಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ.
ಮೇಘಾಲಯ, ನಾಗಾಲ್ಯಾಂಡ್ ರಾಜ್ಯಗಳ ಮುಖ್ಯಮಂತ್ರಿಗಳೂ ಸಹ ಇದೇ ರೀತಿಯ ವಿವರಣೆಗಳನ್ನು ನೀಡಿದ್ದಾರೆ.
ಲಸಿಕಾಕರಣಕ್ಕೆ ವೇಗ ನೀಡಲು ಇಂದು ಮೋದಿ ಸಭೆ
ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಕೋವಿಡ್ ಲಸಿಕೆ ನೀಡಿದ ಸುಮಾರು 10 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಹಾಗೂ ಲಸಿಕೆ ನೀಡಿಕೆಯಲ್ಲಿ ಹಿಂದೆಬಿದ್ದಿರುವ 49 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ನ.3ರಂದು ಸಭೆ ನಡೆಸಲಿದ್ದಾರೆ.
ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮುಂತಾದ 10 ರಾಜ್ಯಗಳು ಶೇ.50ಕ್ಕಿಂತ ಕಡಿಮೆ ಮೊದಲ ಡೋಸ್ ಅಥವಾ ಎರಡನೇ ಡೋಸ್ ಲಸಿಕೆ ವಿತರಣೆ ಮಾಡಿವೆ. ಈ ರಾಜ್ಯಗಳ 49 ಜಿಲ್ಲೆಗಳು ಲಸಿಕೆ ನೀಡಿಕೆಯಲ್ಲಿ ಹಿಂದುಳಿದಿವೆ.
ಹಾಗಾಗಿ ಈ ಜಿಲ್ಲೆಗಳಲ್ಲಿ ಲಸಿಕಾಕರಣಕ್ಕೆ ವೇಗ ನೀಡುವ ಮಾರ್ಗೋಪಾಯ ಸೂಚಿಸಲು ಪ್ರಧಾನಿ ಮೋದಿ ಅವರು ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರ ಜೊತೆ ಸೇರಿ ಈ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳ ಜೊತೆ ನ.3ರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಸಲಿದ್ದಾರೆ.
ಭಾರತದ ದಾಖಲೆ!
ಯಾರೂ ನಿರೀಕ್ಷೆ ಮಾಡಿರದ ರೀತಿ ಭಾರತ ಬಹುದೊಡ್ಡ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಿದೆ. ನೂರು ಕೋಟಿ ಜನರಿಗೆ ಲಸಿಕೆ ನೀಡಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಈ ಸಾಧನೆಗೆ ಕಾರಣವಾದ ಎಲ್ಲರನ್ನು ಅಭಿನಂದಿಸಿದ್ದರು. ಕೋವಾಕ್ಸಿನ್ ಮತ್ತು ಕೋವಿಡ್ ಶೀಲ್ಡ್ ಲಸಿಕೆಯನ್ನು ಭಾರತ ನಮ್ಮದೇ ದೇಶದಲ್ಲಿ ತಯಾರಿಸಿ ಪ್ರತಿಯೊಬ್ಬ ನಾಗರಿಕನೂ ಕೊರೋನಾ ವಿರುದ್ಧ ಹೋರಾಟ ಮಾಡಲು ಸಜ್ಜುಮಾಡಿದೆ.
ಕೊರೋನಾ ಭಾರತದಲ್ಲಿ ಇಳಿಕೆ ಕಂಡಿದ್ದರೂ ಇಂಗ್ಲೆಂಡ್ ಮತ್ತು ಚೀನಾ ಹಾಗೂ ರಷ್ಯಾ ರೂಪಾಂತರಿ ಕಾಟಕ್ಕೆ ತತ್ತರಿಸುತ್ತಿವೆ. ರಷ್ಯಾದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು ವೇತನ ಸಹಿತ ರಜೆಗೆ ತೀರ್ಮಾನ ಮಾಡಲಾಗಿದೆ. ಯಾವ ಕಾರಣಕ್ಕೂ ಮಾಸ್ಕ್ ಮತ್ತು ಸಾಮಾಜಿಕ ಅಂತರ ಮರೆಯಬೇಡಿ.