ನವದೆಹಲಿ(ಮಾ.23): ಕೇಂದ್ರ ಗೃಹ ಸಚಿವಾಲಯ ನೂತನ ಕೊರೋನಾ ಮಾರ್ಗಸೂಚಿ ಪ್ರಕಟಿಸಿದೆ. ಕೊರೋನಾ ವೈರಸ್ ನಿಯಂತ್ರಣ, ಕಠಿಣ ನಿಯಮ ಎಪ್ರಿಲ್ 1 ರಿಂದ ಎಪ್ರಿಲ್ 30ರ ವರೆಗೆ ಇರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.  ಟೆಸ್ಟ್, ಟ್ರಾಕ್ ಹಾಗೂ ಟ್ರೀಟ್ ಈ ತ್ರಿಬಲ್ ಟಿ ವಿಚಾರದಲ್ಲಿ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಪಾಲಿಸಬೇಕು ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಆರ್ಭಟ: ಮತ್ತೆ ಕರುನಾಡನ್ನೇ ಬೆಚ್ಚಿಬೀಳಿಸಿದ ಮಹಾಮಾರಿ

ಅಂತರ್ ರಾಜ್ಯ ಹಾಗೂ ರಾಜ್ಯದೊಳಗಿನ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಂತರ್ ರಾಜ್ಯ ಸಂಚಾರಕ್ಕೆ ಪರವಾನಗೆ ಪಡೆಯುವ ಅವಶ್ಯಕತೆ ಇಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೆ ವಿದೇಶ ಪ್ರಯಾಣ ಹಾಗೂ ವಿದೇಶದಿಂದ ಆಗಮಿಸುವವರ ಮೇಲೆ ನಿಗಾ ಇಡಲು ಆಯಾ ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ನಿರ್ಧಾರ ಕೈಗೊಳ್ಳಬೇಕು ಎಂದಿದೆ.

ಎಲ್ಲಾ ಸರ್ಕಾರಗಳು ಕೊರೋನಾ ಪರೀಕ್ಷೆ ಹೆಚ್ಚು ಮಾಡಿಸಬೇಕು. ಕೊರೋನಾ ಹಾಟ್ ಸ್ಪಾಟ್ ಹುಡುಕಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.  ಆರ್‌ಟಿ-ಪಿಸಿಆರ್ ಪರೀಕ್ಷೆಗಳ ಪ್ರಮಾಣ ವನ್ನು ಶೇಕಡಾ 70 ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ಏರಿಸಬೇಕು.  ಪಾಸಿಟೀವ್ ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ, ಕ್ವಾರಂಟೈನ್ ಸೇರಿದಂತೆ ಕೊರೋನಾ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಕೇಂದ್ರ ಹೇಳಿದೆ.

ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಸೇರಿದಂತೆ ಕೊರೋನಾ ಮಾರ್ಗಸೂಚಿ ಪಾಲನೆಗೆ ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಎಪ್ರಿಲ್ 1 ರಿಂದ ಆಯಾ ರಾಜ್ಯಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ. ಕೊರೋನಾ ಲಸಿಕೆ ನೀಡುವಿಕೆಯನ್ನು ಹೆಚ್ಚಿಸಬೇಕು ಎಂದಿದೆ.