Hijab Row: ಪುರುಷರು ಸ್ವಯಂನಿಯಂತ್ರಣ ಮಾಡಿಕೊಂಡ್ರೆ ಹಿಜಾಬ್‌ ಬೇಡ: ಹರ್ಯಾಣ ಸಚಿವ

Karnataka Hijab Row: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌‌ ನಿಷೇಧಿಸಿ ಕರ್ನಾಟಕ ಸರ್ಕಾರ ಫೆಬ್ರವರಿಯಲ್ಲಿ ಹೊರಡಿಸಿದ್ದ ಆದೇಶದ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟಿನಿ ದ್ವಿಸದಸ್ಯ ಪೀಠ ಗುರುವಾರ ಭಿನ್ನ ತೀರ್ಪು ನೀಡಿದೆ

Men without self control forced women to wear Hijab says Haryana Minister mnj

ನವದೆಹಲಿ (ಅ. 14): ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌‌ (Hijab Row) ನಿಷೇಧಿಸಿ ಕರ್ನಾಟಕ ಸರ್ಕಾರ ಫೆಬ್ರವರಿಯಲ್ಲಿ ಹೊರಡಿಸಿದ್ದ ಆದೇಶದ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟಿನಿ ದ್ವಿಸದಸ್ಯ ಪೀಠ ಗುರುವಾರ ಭಿನ್ನ ತೀರ್ಪು ನೀಡಿದೆ. ಹಿಜಾಬ್‌ ನಿಷೇಧ ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ 26 ಅರ್ಜಿಗಳನ್ನೂ ನ್ಯಾ. ಹೇಮಂತ ಗುಪ್ತಾ ಅವರು ವಜಾಗೊಳಿಸಿದ್ದರೆ, ಮತ್ತೊಬ್ಬ ನ್ಯಾಯಮೂರ್ತಿ ಸುಧಾಂಶು ಧೂಲಿಯಾ ಅವರು ಅರ್ಜಿಗಳಿಗೆ ಮನ್ನಣೆ ನೀಡಿ, ಕರ್ನಾಟಕ ಹೈಕೋರ್ಚ್‌ ತಪ್ಪು ತೀರ್ಪು ನೀಡಿದೆ ಎಂದು ವ್ಯಾಖ್ಯಾನಿಸಿದ್ದಾರೆ. ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಿಂದ ಪರಸ್ಪರ ವೈರುಧ್ಯದ ತೀರ್ಪು ಬಂದಿರುವ ಕಾರಣ ಹಿಜಾಬ್‌ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಬೇಕಾಗುತ್ತದೆ.

ಪುರುಷರು ಸ್ವಯಂನಿಯಂತ್ರಣ ಮಾಡಿಕೊಂಡ್ರೆ ಹಿಜಾಬ್‌ ಬೇಡ: ‘ಪುರುಷರು ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮಹಿಳೆಯರನ್ನು ಕಂಡಾಗ ತಮ್ಮಲ್ಲಾಗುವ ಉದ್ವೇಗವನ್ನು ಪುರುಷರು ನಿಯಂತ್ರಿಸಿಕೊಳ್ಳಬೇಕು. ಆಗ ಮಹಿಳೆಯರಿಗೆ ಹಿಜಾಬ್‌ನಿಂದ ಮುಕ್ತಿ ಸಾಧ್ಯ’ ಎಂದು ಹರ್ಯಾಣ ಸಚಿವ ಅನಿಲ್‌ ವಿಜ್‌ ಹೇಳಿದ್ದಾರೆ. ‘ಪುರುಷರ ಉದ್ವೇಗತನಕ್ಕೆ ಮಹಿಳೆಯರು ಶಿಕ್ಷೆ ಅನುಭವಿಸುವಂತಾಗಿದೆ. ಅಡಿಯಿಂದ ಮುಡಿವರೆಗೂ ಹಿಜಾಬ್‌-ಬುರ್ಖಾ ಧರಿಸುವುದು ಮಹಿಳೆಯರಿಗೆ ಶಿಕ್ಷೆಯಾಗಿದೆ’ ಎಂದು ಹೇಳಿದ್ದಾರೆ. ಗುರುವಾರ ಸುಪ್ರೀಂ ಕೋರ್ಟ್ ಹಿಜಾಬ್‌ ತೀರ್ಪಿನ ಬೆನ್ನಲ್ಲೇ ಅನಿಲ್‌ ವಿಜ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‌

ಪೀಠದಲ್ಲಿ ಒಬ್ಬ ಮುಸ್ಲಿಂ ಜಡ್ಜ್‌ ಇರಲಿ: ಬಾರ್‌ ಕೌನ್ಸಿಲ್‌ ಆಗ್ರಹ:  ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಚ್‌ ನ್ಯಾಯಮೂರ್ತಿಗಳು ಪರಸ್ಪರ ವೈರುಧ್ಯದ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಲಿದೆ. ಹಾಗಾಗಿ ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಯಾಗುವ ವಿಸ್ತೃತ ಪೀಠದಲ್ಲಿ ಓರ್ವ ಮುಸ್ಲಿಂ ಸಮುದಾಯಕ್ಕೆ ಸೇರಿದ ನ್ಯಾಯಾಧೀಶರು ಸಹ ಇರಬೇಕು ಎಂದು ಅಖಿಲ ಭಾರತ ಬಾರ್‌ ಅಸೋಸಿಯೇಶನ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದೆ. ದ್ವಿಸದಸ್ಯ ಪೀಠ ಒಮ್ಮತದ ತೀರ್ಪು ನೀಡದ ಕಾರಣ ಹಿಜಾಬ್‌ ಪ್ರಕರಣ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಅವರ ಅಂಗಳದಲ್ಲಿದೆ.

Hijab Case: ಜಾತ್ಯಾತೀತತೆ ಒಂದೇ ಧರ್ಮಕ್ಕೆ ಸೀಮಿತವೇ?: ತೀರ್ಪಿನಲ್ಲಿ ಪ್ರಶ್ನಿಸಿದ ನ್ಯಾ.ಹೇಮಂತ್‌ ಗುಪ್ತಾ

ಸುಪ್ರೀಂ ತೀರ್ಪಿನವರೆಗೂ ಹೈಕೋರ್ಟ್ ಹಿಜಾಬ್‌ ಆದೇಶ ಪಾಲನೆ: ಹಿಜಾಬ್‌ ಪ್ರಕರಣ ಸುಪ್ರೀಂಕೋರ್ಟಿನಿ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ಕರ್ನಾಟಕ ಹೈಕೋರ್ಚ್‌ ನೀಡಿರುವ ತೀರ್ಪು ಪ್ರಸ್ತುತ ಮಾನ್ಯವಾಗಿರುತ್ತದೆ. ಹಾಗಾಗಿ ರಾಜ್ಯದ ಯಾವುದೇ ಶಾಲೆ, ಕಾಲೇಜುಗಳಲ್ಲಿ ಧರ್ಮಾಧಾರಿತ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಹಿಜಾಬ್‌ ತೀರ್ಪಿನ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಹಿಜಾಬ್‌ ವಿಚಾರವಾಗಿ ಪ್ರತ್ಯೇಕ ನಿಲುವು ಬಂದಿರುವುದರಿಂದ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಇದರಿಂದ ಯಾವುದೇ ಬೇಸರ ಇಲ್ಲ. ಪೂರ್ಣ ಪೀಠದಲ್ಲಿ ವಿಸ್ತೃತ ಚರ್ಚೆ ನಡೆದು ತೀರ್ಪು ಬರುವವರೆಗೆ ಕಾಯುತ್ತೇವೆ. ಅಲ್ಲಿಯವರೆಗೆ ಹಿಜಾಬ್‌ ವಿಚಾರದಲ್ಲಿ ಹೈಕೋರ್ಚ್‌ ಆದೇಶವೇ ಮಾನ್ಯವಾಗಿರುತ್ತದೆ. ಹಾಗಾಗಿ ಈ ವಿಚಾರವಾಗಿ ಇಲಾಖೆ ಇದುವರೆಗೆ ಹೊರಡಿಸಿರುವ ಯಾವುದೇ ಆದೇಶ, ಸೂಚನೆ, ಸುತ್ತೋಲೆಗಳನ್ನು ಹಿಂಪಡೆಯುವ, ಪರಿಷ್ಕರಿಸುವ ಅಥವಾ ಹೊಸ ಆದೇಶ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವು ಯಥಾಸ್ಥಿತಿ ಜಾರಿಯಲ್ಲಿರುತ್ತವೆ ಎಂದರು.

ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ, ಯಾವುದೇ ಧರ್ಮವನ್ನು ಪ್ರತಿನಿಧಿಸುವ ಉಡುಪು ಧರಿಸಿ ಶಾಲಾ-ಕಾಲೇಜು ಪ್ರವೇಶಕ್ಕೆ ಅವಕಾಶ ಇಲ್ಲ. ಇದರ ಆಧಾರದಲ್ಲಿ ನೀಡಿದ್ದ ಹೈಕೋರ್ಚ್‌ ತೀರ್ಪನ್ನು ಪಾಲಿಸಿದ್ದೆವು. ಮುಂದೆ ಸುಪ್ರೀಂ ಕೋರ್ಚ್‌ ತೀರ್ಪಿಗಾಗಿ ಕಾಯುತ್ತೇವೆ ಎಂದರು.

Hijab Case: ಮುಸ್ಲಿಂ ಪುರುಷ ಪ್ರಧಾನ ವ್ಯವಸ್ಥೆಯ ಮಾನಸಿಕತೆ ಬದಲಾಯಿಸುವ ಅವಕಾಶವಿತ್ತು!

ಪ್ರಕರಣ ಮುಂದೇನು?

  • ಹಿಜಾಬ್‌ ವಿಷಯ ಸುಪ್ರೀಂಕೋರ್ಚ್‌ನ ಮುಖ್ಯ ನ್ಯಾಯಾಧೀಶರ ಅಂಗಳಕ್ಕೆ ಹೋಗುತ್ತದೆ
  • ಮುಖ್ಯ ನ್ಯಾಯಾಧೀಶರು ತ್ರಿಸದಸ್ಯ ಅಥವಾ ವಿಸ್ತೃತ ಪೀಠ ರಚಿಸಿ ವಿಚಾರಣೆಗೆ ಸೂಚಿಸುತ್ತಾರೆ
  • ಆಗ ಮತ್ತೆ ಮೊದಲಿನಿಂದ ಹಿಜಾಬ್‌ ವಿವಾದದ ವಿಚಾರಣೆ ಆರಂಭವಾಗಿ, ಬಳಿಕ ತೀರ್ಪು ಪ್ರಕಟ
  • ಮುಂದಿನ ಆದೇಶದವರೆಗೆ ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಅಬಾಧಿತ
Latest Videos
Follow Us:
Download App:
  • android
  • ios