ನವ​ದೆ​ಹ​ಲಿ(ಜೂ.09): ಪಿಎ​ನ್‌ಬಿ ಬಹು​ಕೋಟಿ ವಂಚನೆ ಪ್ರಕ​ರ​ಣದ ಆರೋಪಿ ವಜ್ರೋ​ದ್ಯಮಿ ಮೆಹುಲ್‌ ಚೋಕ್ಸಿ ತನ್ನ ಪ್ರಿಯ​ತ​ಮೆಗೂ ನಕಲಿ ವಜ್ರದ ಉಂಗು​ರ​ಗಳು ಮತ್ತು ಬ್ರೇಸ್‌​ಲೇ​ಟ್‌​ಗ​ಳನ್ನು ನೀಡಿ ವಂಚಿ​ಸಿದ್ದ ಎಂಬ ವಿಚಾರ ತಿಳಿ​ದು​ಬಂದಿದೆ. ಈ ಕುರಿತು ಚೋಕ್ಸಿ ಅವರ ಪ್ರೇಯ​ಸಿ ಎನ್ನ​ಲಾದ ಬರ್ಬರಾ ಜರಾ​ಬಿಕಾ ಅವರೇ ನೇರ ಆರೋಪ ಮಾಡಿ​ದ್ದಾರೆ.

ಈ ಸಂಬಂಧ ಆಂಗ್ಲ ಮಾಧ್ಯ​ಮ​ವೊಂದಕ್ಕೆ ಮಂಗಳವಾರ ಸಂದ​ರ್ಶನ ನೀಡಿದ ಜರಾ​ಬಿ​ಕಾ, ಕಳೆದ ವರ್ಷ ಆ್ಯಂಟಿ​ಗು​ವಾಗೆ ತೆರ​ಳಿ​ದ್ದಾಗ ನನ್ನನ್ನು ಭೇಟಿ ಮಾಡಿದ್ದ ಚೋಕ್ಸಿ ತನ್ನನ್ನು ರಾಜ್‌ ಎಂದು ಪರ​ಚ​ಯಿ​ಸಿ​ಕೊಂಡಿದ್ದ. ಆ ಬಳಿಕ ನಾವು ಆತ್ಮೀಯ ಸ್ನೇಹಿ​ತ​ರಾ​ಗಿದ್ದು, ನನಗೆ ಆತ ಹಲವು ವಜ್ರದ ಉಂಗು​ರ​ಗಳು ಮತ್ತು ಬ್ರೇಸ್‌​ಲೆ​ಟ್‌​ಗ​ಳನ್ನು ಉ​ಡು​ಗೊ​ರೆ​ಯಾಗಿ ನೀಡಿದ್ದ. ಆದರೆ ಅವೆ​ಲ್ಲವೂ ನಕಲಿ ಎಂದು ತಡ​ವಾಗಿ ತಿಳಿ​ಯಿತು ಎಂದು ದೂರಿ​ದ್ದಾರೆ. ಜೊತೆಗೆ ಆ್ಯಂಟಿ​ಗು​ವಾ​ದಿಂದ ಡೊಮಿ​ನಿ​ಕಾಗೆ ತನ್ನ ಅಪ​ಹ​ರಣ ಕೃತ್ಯ​ದಲ್ಲಿ ತನ್ನ ಪ್ರೇಯ​ಸಿಯೂ ಭಾಗಿ​ಯಾ​ಗಿ​ದ್ದಳು ಎಂಬ ಚೋಕ್ಸಿ ಆರೋ​ಪ​ವನ್ನು ಜರಾ​ಬಿಕಾ ನಿರಾ​ಕ​ರಿ​ಸಿ​ದರು.

ಚೋಕ್ಸಿ ಅಪ​ಹ​ರ​ಣ​ದಲ್ಲಿ ತನ್ನದು ಯಾವುದೇ ಪಾತ್ರ ಇಲ್ಲ. ಆದಾಗ್ಯೂ, ಚೋಕ್ಸಿಯ ವಕೀ​ಲರು ಮತ್ತು ಕುಟುಂಬ ಸದ​ಸ್ಯರು ನನ್ನ ಹೆಸ​ರನ್ನು ಎಳೆ​ದು ತಂದಿ​ದ್ದಾರೆ. ನಾನು ಮತ್ತು ನನ್ನ ಕುಟುಂಬ ತುಂಬಾ ಒತ್ತ​ಡ​ದ​ಲ್ಲಿದೆ ಎಂದು ಹೇಳಿ​ದರು.