ಹೈದರಾಬಾದ್(ಫೆ.19): ಇದೇ ಫೆ.24ರಿಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಎರಡು ದಿನಗಳಖ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಟ್ರಂಪ್ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಅಂತಿಮ ಹಂತದಲ್ಲಿದೆ.

ಇನ್ನು ಭಾರತಕ್ಕೂ ಭೇಟಿ ನೀಡುವ ಮುನ್ನವೇ ದೇಶಾದ್ಯಂತ ಟ್ರಂಪ್‌ ಹವಾ ಜೋರಾಗಿದೆ. ತೆಲಂಗಾಣದ ಟ್ರಂಪ್‌ ಅಭಿಮಾನಿಯೊಬ್ಬ ಟ್ರಂಪ್‌ ಅವರ 6 ಅಡಿ ಎತ್ತರದ ಪ್ರತಿಮೆ ನಿರ್ಮಿಸಿದ್ದು, ಅಮೆರಿಕ ಅಧ್ಯಕ್ಷರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಕೊನ್ನೆಯ ಗ್ರಾಮದ ಬುಸ್ಸಾ ಕೃಷ್ಣ ಎಂಬಾತ ಡೋನಾಲ್ಡ್ ಟ್ರಂಪ್ ಅಭಿಮಾನಿಯಾಗಿದ್ದು, ಅವರನ್ನು ದೇವರು ಎಂದೇ ಪ್ರಾರ್ಥಿಸುತ್ತಾನೆ. ಟ್ರಂಪ್ ಪ್ರತಿಮೆಗೆ ನಿತ್ಯವೂ ಬುಸ್ಸಾ ಕೃಷ್ಣ ಪೂಜೆ ಸಲ್ಲಿಸುತ್ತಾನೆ.

ಬುಸ್ಸಾ ಕೃಷ್ಣನ ಟ್ರಂಪ್ ಮೇಲಿನ ಅಭಿಮಾನ ನೋಡಿ ಗ್ರಾಮಸ್ಥರೆಲ್ಲರೂ ಆತನನ್ನು ಟ್ರಂಪ್ ಕೃಷ್ಣ ಎಂದೇ ಕರೆಯುತ್ತಾರೆ. ಅಲ್ಲದೇ ಬುಸ್ಸಾ ಕೃಷ್ಣ ವಾಸವಿರುವ ಮನೆಗೆ ‘ಟ್ರಂಪ್ ಹೌಸ್’ ಎಂದು ನಾಮಕರಣ ಮಾಡಲಾಗಿದೆ.

ಭಾರತ ಚೆನ್ನಾಗಿ ನೋಡಿಕೊಂಡಿಲ್ಲ: ಬರವುದಕ್ಕೂ ಮೊದಲೇ ಇದೇನು ಹೇಳಿಬಿಟ್ರಿ ಟ್ರಂಪ್?

ಭಾರತ-ಅಮೆರಿಕ ಸಂಬಂಧಗಳು ಸದೃಢವಾಗಿ ಇರಬೇಕೆಂದು ನಾನು ಬಯಸುತ್ತೇನೆ. ಪ್ರತಿ ಶುಕ್ರವಾರ ನಾನು ಟ್ರಂಪ್ ಅವರ ದೀರ್ಘಾಯಸ್ಸು ಬಯಸಿ ಉಪವಾಸ ಮಾಡುತ್ತೇನೆ ಎಂದು ಬುಸ್ಸಾ ಕೃಷ್ಣ ಹೇಳಿದ್ದಾರೆ.

ಇನ್ನು ಟ್ರಂಪ್ ಮೇಲಿನ ಬುಸ್ಸಾ ಕೃಷ್ಣ ಅವರ ಅಭಿಮಾನಕ್ಕೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದು, ಆತನ ಭಕ್ತಿ ನಿಜಕ್ಕೂ ಅಪರೂಪ ಎಂದು ಹೇಳುತ್ತಾರೆ.

ಟ್ರಂಪ್ ಭಾರತ ಭೇಟಿಯ ವೇಳೆ ತಾನು ಅವರನ್ನು ಭೇಟಿಯಾಗಲು ಬಯಸಿರುವುದಾಗಿ ತಿಳಿಸಿರುವ ಬುಸ್ಸಾ ಕೃಷ್ಣ, ಭೇಟಿಗೆ ಅವಕಾಶ ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಫೆಬ್ರವರಿ 24 ರಂದು ಎರಡು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಲಿದ್ದು, ಅವರೊಂದಿಗೆ ಅಮೆರಿಕ ಪ್ರಥಮ ಮಹಿಳೆ ಹಾಗೂ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಭಾರತಕ್ಕೆ ಬರಲಿದ್ದಾರೆ.