ಜೈಪುರ(ನ.05) ರಾಜಸ್ಥಾನ ನಗರ ನಿಗಮ ಚುನಾವಣೆಯ ಫಲಿತಾಂಶ ನಿನ್ನೆ, ಬುಧವಾರ ಹೊರ ಬಿದ್ದಿದೆ. ಇದರಲ್ಲಿ ಜಯ್ಲುರ, ಜೋಧ್ಪುರ ಹಾಗೂ ಕೋಟಾ ನಗರ ನಿಗಮದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇನ್ನು ಇಲ್ಲಿನ ಹೆರಿಟೇಜ್ ನಗರ ಪಾಲಿಕೆಯಲ್ಲಿ 21 ವರ್ಷದ ಆಸ್ಮಾ ಖಾನ್, ಅತ್ಯಂತ ಕಿರಿಯ ವಯಸ್ಸಲ್ಲಿ ಕೌನ್ಸಿಲರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆಸ್ಮಾ ಜಯ್ಪುರದ ಘಾಟ್‌ ಗೇಟ್‌ನ ವಾರ್ಡ್‌ ನಂಬರ್ 81ರ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ.

ಶುಭ ಕೋರಿದ ಅಶೋಕ್ ಗೆಹ್ಲೋಟ್

ಆಸ್ಮಾ ಖಾನ್ ಜಯ್ಪುರದ ಘಾಟ್‌ ಗೇಟ್‌ ಪ್ರದೇಶದಲ್ಲಿ 1999ರ ಅಕ್ಟೋಬರ್‌ನಲ್ಲಿ ಜನಿಸಿದರು. ಇದರ ಅನ್ವಯ ಅವರ ವಯಸ್ಸು ಸದ್ಯ 21 ವರ್ಷ. ಅವರು ಇದೇ ಮೊದಲ ಬಾರಿ ಕಾಂಗ್ರೆಸ್ ಪಕ್ಷದಿಂದ ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿದ್ದರು. ಹೀಗಿರುವಾಗ ಅವರು ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿದ್ದಾರೆ. ಮಂಗಳವಾರ ಸಿಎಂ ಅಶೋಕ್ ಗೆಹ್ಲೋಟ್ ಖುದ್ದು ಟ್ವೀಟ್ ಮಾಡಿ ಆಸ್ಮಾಗೆ ಶುಭ ಕೋರಿದ್ದಾರೆ.

ಆಸ್ಮಾಳನ್ನು ಆನೆ ಮೇಲೆ ಕರೆದೊಯ್ದು ಮೆರವಣಿಗೆ

ಆಸ್ಮಾ ಈ ಚುನಾವಣೆಯಲ್ಲಿ ಗೆದ್ದು ತನ್ನ ಮನೆಗೆ ತಲುಪಿದಾಗ ಆಸುಪಾಸಿನ ನಿವಾಸಿಗರು ಹಾಗೂ ಬೆಂಬಲಿಗರು ಅವರನ್ನು ಆನೆ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿಸಿದರು. ಆಸ್ಮಾಳನ್ನು ಆ ಪ್ರದೇಶದ ಗಲ್ಲಿ ಗಲ್ಲಿಯ ಜನರೂ ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಅಲ್ಲದೇ ಈ ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. 

ತಂದೆಯ ಕನಸು ನನಸು ಮಾಡಿದ ಮಗಳು:

ಜಯ್ಪುರದ ವಾರ್ಡ್‌ ನಂಬರ್ 81ರಿಂದ ಆಸ್ಮಾ ತಂದೆ ಸಲೀಂ ಖಾನ್ ಕಣಕ್ಕಿಳಿಯಲಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಈ ವಾರ್ಡ್‌ ಮಹಿಳಾ ಮೀಸಲಾತಿಗೆ ಒಳಪಟ್ಟಿತು. ಹೀಗಾಗಿ ತಂದೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಗಲಿಲ್ಲ. ಹೀಗಾಗಿ ಅವರು ತಮ್ಮ ಮಗಳನ್ನು ಈ ಚುನಾವಣೆಯಲ್ಲಿ ಕಣಕ್ಕಿಳಿಸಿದರು. ತಂದೆ ತನ್ನನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚಿಸಿದಾಗ ಆರಂಭದಲ್ಲಿ ಆಸ್ಮಾ ಇದಕ್ಕೆ ಒಪ್ಪಲಿಲ್ಲ. ಆದರೆ ಅಂತಿಮವಾಗಿ ನೆರೆ ಹೊರೆಯವರ ಹಾಗೂ ಕುಟುಂಬ ಸದಸ್ಯರ ಸಲಹೆಯಂತೆ ಕಣಕ್ಕಿಳಿದರು. ತಂದೆ ಕೂಡಾ ಮಗಳ ಗೆಲುವಿಗಾಗಿ ಬಹಳಷ್ಟು ಶ್ರಮ ವಹಿಸಿದ್ದಾರೆ. ಇದೆಲ್ಲದರ ಪರಿಣಾಮವೆಂಬಂತೆ ಹಾಗೂ ಜನರ ಸಹಕಾರದಿಂದ ಆಸ್ಮಾ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ.

ಶಿಕ್ಷಣದೊಂದಿಗೆ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಆಸ್ಮಾ:

ಚುನಾವಣೆ ಗೆದ್ದ ಆಸ್ಮಾ ಮುಸ್ಲಿಂ ಸಮುದಾಯದಲ್ಲಿ ಹೆಣ್ಮಕ್ಕಳು ಹಿಂದೆ ಉಳಿದಿದ್ದಾರೆ. ತಾನು ಅವರಿಗಾಗಿ ಕೆಲಸ ಮಾಡುತ್ತೇನೆ. ಅವರಿಗೆ ಉತ್ತಮ ಅವಕಾಶ ಸಿಗಲು ಶ್ರಮಿಸುತ್ತೇನೆ ಎಂದಿದ್ದಾರೆ. ಅಲ್ಲದೇ ರಾಜಕೀಯದೊಂದಿಗೆ ತನ್ನ ಶಿಕ್ಷಣವನ್ನೂ ಮುಂದುವರೆಸುತ್ತೇನೆ ಎಂದೂ ಆಸ್ಮಾ ತಿಳಿಸಿದ್ದಾರೆ. ಆಸ್ಮಾ ಖಾನ್ ಜಯ್ಪುರದ ಸರ್ಕಾರಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ನಡೆಸುತ್ತಿದ್ದಾರೆ. ಇನ್ಮುಂದೆ ತನ್ನ ವ್ಯಾಪ್ತಿಗೆ ಒಳಪಡುವ ಇಲಾಖೆಯ ಜನರ ಸಮಸ್ಯೆ ಪರಿಹರಿಸಲು ಯತ್ನಿಸಲಿದ್ದಾರೆ.