ನವದೆಹಲಿ[ಡಿ.31]: 2019ರಲ್ಲಿ ದೇಶ ಹಲವಾರು ಗಣ್ಯರನ್ನು ಕಳೆದುಕೊಂಡಿದೆ. ರಾಜಕೀಯ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಬಿಜೆಪಿಯು ತನ್ನ ಘಟಾನುಘಟಿ ನಾಯಕರನ್ನು ಕಳೆದುಕೊಂಡಿದೆ. ಮನೋಹರ್ ಪರ್ರಿಕರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಹೀಗೆ ಒಬ್ಬರಾದ ಬಳಿಕ ಮತ್ತೊಬ್ಬರಂತೆ ಕಮಲ ಪಾಳಯದ ಗಣ್ಯರು ನಿಧನರಾಗಿದ್ದಾರೆ. 

ಇತ್ತ ಕಾಂಗ್ರೆಸ್ ದೆಹಲಿ ರಾಜಕಾರಣದಲ್ಲಿ ಪ್ರಮುಖ ನಾಯಕಿ ಎನಿಸಿಕೊಂಡ ಶೀಲಾ ದೀಕ್ಷಿತ್ ರನ್ನು ಕಳೆದುಕೊಂಡಿದೆ. ಇನ್ನು ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅಗಲುವಿಕೆ ಭಾರೀ ನಷ್ಟವುಂಟು ಮಾಡಿದ್ದರೆ, ಸಿದ್ದಗಂಗಾ ಶ್ರೀ ಹಾಗೂ ಪೇಜಾವರ ಶ್ರೀಗಳ ಅಗಲುವಿಕೆ ಧಾರ್ಮಿಕ, ಅಧ್ಯಾತ್ಮಿಕ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ .

* ಸಿದ್ದಗಂಗಾ ಶ್ರೀ

ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ[111] ಜನವರಿ 21 ರಂದು ಲಿಂಗೈಕ್ಯರಾದರು. ಅತಿ ಹೆಚ್ಚು ಗೌರವಿಸಲ್ಪಡುತ್ತಿದ್ದ ಶತಮಾನದ ಸಂತ ಶಿವಕುಮಾರ ಸ್ವಾಮೀಜಿ ಅನಾಥ ಹಾಗೂ ಬಡ ಮಕ್ಕಳ ಪಾಲಿನ ಆಶಾಕಿರಣ್ವಾಗಿದ್ದರು. ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಉಚಿತ ಅನ್ನ, ಅಕ್ಷರ, ಆಶ್ರಯ ದಾನ ಮಾಡಿ ಹಲವರ ಪಾಲಿಗೆ ಕಣ್ಣಿಗೆ ಕಾಣುವ ದೇವರಾಗಿದ್ದರು. 

* ಜಾರ್ಜ್ ಫೆರ್ನಾಂಡಿಸ್

ಮಾಜಿ ರಕ್ಷಣಾ ಸಚಿವ, ಬಿಜೆಪಿ ಹಿರಿಯ ನಾಯಕ ಜಾರ್ಜ್ ಫೆರ್ನಾಂಡಿಸ್[88] ಜನವರಿ 28ರಂದು ನಿಧನರಾದರು. ಅಟಲ್ ಬಿಹಾರ್ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ, 1999ರ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಜಾರ್ಜ್ ದೇಶದ ರಕ್ಷಣಾ ಸಚಿವರಾಗಿದ್ದರೆಂಬುವುದು ಉಲ್ಲೇಖನೀಯ. ಇಂಧಿರಾ ಗಾಂಧಿ ನೇತೃತ್ವದ ಸರ್ಕಾರ 1970ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ವೇಳೆ ಜಾರ್ಜ್ ಫೆರ್ನಾಂಡಿಸ್ ಜೈಲು ಪಾಲಾಗಿದ್ದರು. 1967ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಸ್. ಕೆ. ಪಾಟೀಲ್ ರನ್ನು ಸೋಲಿಸಿ ದೇಶದಾದ್ಯಂತ ಸದ್ದು ಮಾಡಿದ್ದರು.

* ಮನೋಹರ್ ಪರ್ರಿಕರ್

ಗೋವಾ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರ್ರಿಕರ್(69) ಮಾರ್ಚ್ 17ರಂದು ನಿಧನರಾದರು. ದೀರ್ಘ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಪರ್ರಿಕರ್ ತಮ್ಮ ಸರಳತೆಯಿಂದಲೇ ಗುರುತಿಸಿಕೊಂಡವರು. ಸತತ ಮೂರು ಅವಧಿಗೆ ಗೋವಾ ಸಿಎಂ ಆಗಿದ್ದ ಪರ್ರಿಕರ್ ಎಂದರೆ ಜನ ಸಾಮಾನ್ಯರಿಗೆ ಅಚ್ಚುಮೆಚ್ಚು. ತಂತ್ರಜ್ಞಾನ ಕ್ಷೇತ್ರದಲ್ಲಿ ಶಿಕ್ಷಣ ಪಡೆದಿದ್ದರೂ, ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸೇವೆ ಸಲ್ಲಿಸಿದ ಪರ್ರಿಕರ್ ಮುಖ್ಯಮಂತ್ರಿ ಸ್ಥಾನಕ್ಕೇರಿದ ದೇಶದ ಮೊದಲ IIT ಪದವೀಧರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡುವ ಮುನ್ನ RSS ಸ್ವಯಂಸೇವಕರಾಗಿ ಗುರುತಿಸಿಕೊಂಡಿದ್ದರು. ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯದೊಂದಿಗೆ ಯಾವತ್ತೂ ರಾಜಿ ಮಾಡಿಕೊಳ್ಳದ ಪರ್ರಿಕರ್ ಅನಾರೋಗ್ಯದಿಂದ ಬಳಲುತ್ತಿದ್ದರೂ ಜನ ಸೇವೆಯೇ ಜನಾರ್ದನ ಸೇವೆ ಎಂಬಂತೆ ಬದುಕಿದ್ದರು. ಅವರು ಮಂಡಿಸಿದ್ದ ಕೊನೆಯ ಬಜೆಟ್ ಅವರಿಗೆ ಜನರ ಮೇಲಿದ್ದ ಕಾಳಜಿ ವ್ಯಕ್ತಪಡಿಸಿತ್ತು. 

* ಗಿರೀಶ್ ಕಾರ್ನಾಡ್

ಜ್ಞಾನಪೀಠ ಪುರಸ್ಕೃತ, ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್[81] ಜೂನ್ 10 ರಂದು ನಿಧನರಾದರು. 1938 ಮೇ 19ರಂದು ಗಿರೀಶ್ ಕಾರ್ನಾಡ್ ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದ್ದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಗಿರೀಶ್ ಕಾರ್ನಾಡ್, ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದರು. ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿರುವ ಕಾರ್ನಾಡ್, ಆಕ್ಸ್ಫರ್ಡ್ ಡಿಬೇಟ್ ಕ್ಲಬ್ ಅಧ್ಯಕ್ಷರಾದ ಪ್ರಥಮ ಏಷಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕನ್ನಡ, ಹಿಂದಿ, ಪಂಜಾಬಿ, ಮರಾಠಿ ಭಾಷೆಗಳಲ್ಲಿ ಪರಿಣತಿ ಹೊಂದಿದ್ದ ಕಾರ್ನಾಡ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪಸರಿಸಿದ್ದರು. 

ಗಿರೀಶ ಕಾರ್ನಾಡರ ಮೊದಲ ಸಾಹಿತ್ಯ ಕೃತಿ' ಯಯಾತಿ' ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ ತುಘಲಕ್ ಹಾಗೂ ಹಯವದನ ಪ್ರಕಟವಾದವು. ಕಾರ್ನಾಡ್ ಅವರಿಗೆ ಜ್ಞಾನ ಪೀಠ ಪ್ರಶಸ್ತಿ, ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿದ್ದವು.

* ಶೀಲಾ ದೀಕ್ಷಿತ್

ಶೀಲಾ ದೀಕ್ಷಿತ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ದೆಹಲಿಯಲ್ಲಿ ದೀರ್ಘ ಕಾಲ[15 ವರ್ಷ] ಸೇವೆ ಸಲ್ಲಿಸಿದ್ದ ಮುಖ್ಯಮಂತ್ರಿ. 88 ವರ್ಷದ ಶೀಲಾ ದೀಕ್ಷಿತ್ ಹೃದಯಾಘಾತದಿಂದಾಗಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 20ರಂದು ಕೊನೆಯುಸಿರೆಳೆದಿದ್ದರು. 1998 ರಿಂದ 2013ರವರೆಗೆ, 3 ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಶೀಲಾ ದೀಕ್ಷಿತ್ ದೆಹಲಿಗೆ ಆಧುನಿಕ ಸ್ಪರ್ಶ ನೀಡಿದವರು.

ರಸ್ತೆ, ಸಾರಿಗೆ, ಫ್ಲೈಓವರ್ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಆದರೆ 2014ರಲ್ಲಿ ಅರವಿಂದ್ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಗೆದ್ದ ಬಳಿಕ, ಶೀಲಾ ದೀಕ್ಷಿತ್ ಕೇರಳದ ರಾಜ್ಯಪಾಲರಾಗಿ ಆಯ್ಕೆಯಾದರು. ಆದರೆ ಕೇವಲ 6 ತಿಂಗಳಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2019ರ ಆರಂಭದಲ್ಲಿ ಶೀಲಾ ದೀಕ್ಷಿತ್ ರನ್ನು ದೆಹಲಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರನ್ನಾಗಿ ನೇಮಿಸಲಾಯ್ತು. ಲೋಕಸಭೆಯಲ್ಲಿ ಸ್ಪರ್ಧಿಸಿದ ಶೀಲಾ, ಬಿಜೆಪಿಯ ಮನೋಜ್ ತಿವಾರಿ ಎದುರು ಸೋಲನುಭವಿಸಿದ್ದರು.

* ಸುಷ್ಮಾ ಸ್ವರಾಜ್:

ಮಾಜಿ ವಿದೇಶಾಂಗ ಸಚಿವೆ ಹಾಗೂ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್[67] ಆಗಸ್ಟ್ 6 ರಂದು ಹೃದಯಾಘಾತದಿಂದ ಮೃತಪಟ್ಟರು. ಇವರ ಕಾಲಿಕ ನಿಧನ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸುಷ್ಮಾ ಭಾರತದ ಅತಿ ಹೆಚ್ಚು ಗೌರವಿಸಲ್ಪಡುವ ನಾಯಕಿಯಾಗಿದ್ದರು.

ವಿದೇಶಾಂಗ ಇಲಾಖೆಯಲ್ಲಿ ಯಾವ ರೀತಿ ಸೇವೆ ಸಲ್ಲಿಸಬಹುದೆಂದು ಸುಷ್ಮಾ ಸ್ವರಾಜ್ ಇಡೀ ವಿಶ್ವಕ್ಕೇ ತೋರಿಸಿಕೊಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸಕ್ರಿಯರಾಗಿದ್ದ ಸುಷ್ಮಾ, ಈ ಮೂಲಕ ಅನಿವಾಸಿ ಭಾರತೀಯರ ಸೇವೆಗೆ ಮುಂದಾಗುತ್ತಿದ್ದರು. ಯಾವುದೇ ಕ್ಷಣದಲ್ಲಾದರೂ ಅವರ ಬಳಿ ಸಹಾಯ ಕೋರಿದವರ ಸಹಾಯಕ್ಕೆ ಧಾವಿಸುತ್ತಿದ್ದರು.

* ಅರುಣ್ ಜೇಟ್ಲಿ

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಹಣಕಾಸು ಸಚಿವ ಹಾಗೂ ಬಿಜೆಪಿ ಹಿರಿಯ ಅರುಣ್ ಜೇಟ್ಲಿ ಆಗಸ್ಟ್ 24ರಂದು ನಿಧನರಾದರು. ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು ವಿಶ್ವಾಸ ಇರಿಸಿದ್ದ ನಾಯಕರಲ್ಲಿ ಜೇಟ್ಲಿ ಕೂಡಾ ಒಬ್ಬರು. ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಜೇಟ್ಲಿ, 2014ರ ಲೋಕಸಭಾ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಸಿಕ್ಕ ಗೆಲುವಿನ ಅಸಲಿ ಹಕ್ಕುದಾರರು. ಅತ್ಯುತ್ತಮ ವಾಗ್ಮಿಯಾಗಿದ್ದ ಜೇಟ್ಲಿ, ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೂ ಮೊದಲು ವಕೀಲರಾಗಿ ಸೇವೆ ಸಲ್ಲಿಸಿದ್ದರು. ಇವರ ಅಗಲುವಿಕೆ ಬಿಜೆಪಿಗೆ ಬಹುದೊಡ್ಡ ನಷ್ಟವಾಗಿದೆ.

* ರಾಮ್ ಜೇಠ್ಮಲಾನಿ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಕಾನೂನು ಸಚಿವ, ಖ್ಯಾತ ವಕೀಲ ಜೇಠ್ಮಲಾನಿ ಸಪ್ಟೆಂಬರ್ 8 ರಂದು ಕೊನೆಯುಸಿರೆಳೆದಿದ್ದರು. ರಾಮ್ ಜೇಠ್ಮಲಾನಿಗೆ 96 ವರ್ಷ ವಯಸ್ಸಾಗಿತ್ತು. ರಾಮ್‌ಬೂಲ್‌ ಚಂದ್‌ ಜೇಠ್ಮಲಾನಿ ಸಿಂಧ್‌ ಪ್ರಾಂತ್ಯದ ಶಿಕಾರ್ಪುರದಲ್ಲಿ 1923ರ ಸೆಪ್ಟೆಂಬರ್‌ 14ರಂದು ಜನಿಸಿದರು. ತನ್ನ 13ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಶನ್‌ ಮುಗಿಸಿದ ಜೇಠ್ಮಲಾನಿ 17ನೇ ವಯಸ್ಸಿಗೇ ಕಾನೂನು ಪದವಿ ಪಡೆದಿದ್ದರು. 

ಹತ್ತಾರು ಹೈಪ್ರೊಫೈಲ್​ ಹಾಗೂ ವಿವಾದಿತ ಕೇಸ್​ಗಳಲ್ಲಿ ದಿಟ್ಟವಾಗಿ ವಾದ ಮಂಡಿಸಿ, ಸಮರ್ಥವಾಗಿ ನಿಭಾಯಿಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಜೇಠ್ಮಲಾನಿ, 2017ರಲ್ಲಿ ತಮ್ಮ ವಕೀಲಿ ವೃತ್ತಿಗೆ ವಿದಾಯ ಹೇಳಿದ್ದರು. ಮಾಜಿ ಪ್ರಧಾನಿ ಪಿ.ವಿ. ನರಸಿಂಹ್ ರಾವ್ ಮಾತ್ರವಲ್ಲದೇ ಹಲವು ಗಣ್ಯರ ಪರ ವಾದ ಮಂಡನೆ ಮಾಡಿದ್ದರು. ಭಾರತೀಯ ಜನತಾ ಪಕ್ಷದಿಂದ ಮುಂಬೈನಲ್ಲಿ ಚುನಾವಣೆ ಎದುರಿಸಿದ್ದ ಜೇಠ್ಮಲಾನಿ ಎರಡು ಬಾರಿ ಸಂಸದರಾಗಿದ್ದರು. ಕಾನೂನು ಹಾಗೂ ನಗರಾಭಿವೃದ್ದಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು 2010ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು.

* ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ

ಸಂತರ ಸಂತ, ಶಿಷ್ಯರ ಪಾಲಿನ ಮಾತೃರೂಪಿ ಗುರು, ಈ ಶತಮಾನ ಕಂಡ ಅತ್ಯಂತ ಶ್ರೇಷ್ಠ ವಿದ್ವಾಂಸ, ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ (88) ಅವರು ಭಾನುವಾರ ಬೆಳಗ್ಗೆ 9.20ಕ್ಕೆ ತಮ್ಮ ಮಠದಲ್ಲಿ ಕೃಷ್ಣೈಕ್ಯರಾದರು. ಇದರೊಂದಿಗೆ ವೇದಾಂತ ಪಂಡಿತ ಪರಂಪರೆಯ ದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ.

ಡಿ.20ರಂದು ಶ್ರೀಗಳು ತೀವ್ರ ಉಸಿರಾಟದ ತೊಂದರೆಯಿಂದಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ ಕೃತಕ ಉಸಿರಾಟದ ಜೊತೆಗೆ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗಿದ್ದರೂ, ಸುಮಾರು 9 ದಿನಗಳ ಅಪ್ರಜ್ಞಾವಸ್ಥೆಯ ನಂತರ ಕೊನೆಯುಸಿರೆಳೆದರು.