ನವದೆಹಲಿ(ಮೇ.12):  ಅನಾರೋಗ್ಯದಿಂದಾಗಿ ಇಲ್ಲಿನ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ (87) ಅವರಿಗೆ ಹೊಸ ಔಷಧಿಯೊಂದರ ಅಡ್ಡಪರಿಣಾಮದಿಂದ ಜ್ವರ ಬಂದಿತ್ತು ಎಂದು ಮೂಲಗಳು ತಿಳಿಸಿವೆ. ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ತೀವ್ರ ನಿಗಾ ಘಟಕದಲ್ಲಿಟ್ಟು ವೈದ್ಯರು ಗಮನಿಸುತ್ತಿದ್ದಾರೆ. ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್‌ ಎಂದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲು

ಭಾನುವಾರ ಸಂಜೆ ಅವರು ಜ್ವರ ಮತ್ತು ಸುಸ್ತಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ನಡೆಸಿದ ನಂತರ ಹೊಸ ಔಷಧಿಯಿಂದಾಗಿ ಜ್ವರ ಬಂದಿದೆ ಎಂದು ತಿಳಿದುಬಂದಿದೆ. ಅವರ ದೇಹಸ್ಥಿತಿ ಚೆನ್ನಾಗಿಯೇ ಇದೆ. ಇನ್ನೇನೂ ತೊಂದರೆಯಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಸೋಮವಾರ ಅವರ ಜ್ವರ ಸಂಪೂರ್ಣ ಕಡಿಮೆಯಾಗಿದೆ. ಭಾನುವಾರಕ್ಕಿಂತ ಅವರು ಉತ್ತಮವಾಗಿದ್ದಾರೆ. ಒಂದೆರಡು ದಿನದಲ್ಲಿ ಅವರು ಡಿಸ್ಚಾಜ್‌ರ್‍ ಆಗಲಿದ್ದಾರೆ ಎಂದು ತಿಳಿಸಿವೆ.

2009ರಲ್ಲಿ ಮನಮೋಹನ ಸಿಂಗ್‌ ಅವರಿಗೆ ಏಮ್ಸ್‌ನಲ್ಲಿ ಸತತ 14 ಗಂಟೆಗಳ ಕಾಲ ಸಂಕೀರ್ಣವಾದ ಕೊರೊನರಿ ಬೈಪಾಸ್‌ ಸರ್ಜರಿ ನಡೆಸಲಾಗಿತ್ತು.