ಮಣಿಪುರ ಹಿಂಸಾಚಾರ,ಆಸ್ಪತ್ರೆ ತೆರಳುತ್ತಿದ್ದ ತಾಯಿ-ಮಗನ ಜೀವಂತ ಸುಟ್ಟ ಪ್ರತಿಭಟನಾಕಾರರು!
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕುಕಿ ಸಮುದಾಯ ನಡೆಸುತ್ತಿರುವ ಪ್ರತಿಭಟನಾ ಹಿಂಸಾರೂಪಕ್ಕೆ ತೆರಳಿ ಇದೀಗ ಅತೀರೇಖವಾಗಿದೆ. ಗುಂಡು ತುಗಲಿದ 8 ವರ್ಷದ ಮಗನನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ಸಾಗಿಸುತ್ತಿದ್ದ ವೇಳೆ ಪ್ರತಿಭಟನಾಕಾರರು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಇದಿಂದ ಮಗ ಹಾಗೂ ತಾಯಿ ಜೀವಂತ ದಹನವಾಗಿದ್ದಾರೆ.
ಗುವ್ಹಾಟಿ(ಜೂ.07): ಮಣಿಪುರದಲ್ಲಿ ಕುಕಿ ಸಮುದಾಯದ ಹಿಂಸಾತ್ಮಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಲ ದಿನ ಶಾಂತವಾಗಿದ್ದ ಮಣಿಪುರದಲ್ಲಿ ಇದೀಗ ಮತ್ತೆ ಹಿಂಸಾಚಾರ, ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಪಶ್ಚಿಮ ಇಂಪಾಲದಲ್ಲಿ ನಡೆದ ಘಟನೆ ಇಡೀ ಮನುಕುಲವನ್ನೇ ಬೆಚ್ಚಿ ಬೀಳಿಸುತ್ತಿದೆ. ಇಷ್ಟೇ ಅಲ್ಲ ಕುಕಿ ಸಮುದಾಯದ ಪ್ರತಿಭಟನೆ ಯಾರ ವಿರುದ್ಧ ಅನ್ನೋ ಪ್ರಶ್ನೆಯೂ ಏಳುವಂತೆ ಮಾಡಿದೆ. ಕುಕಿ ಸಮುದಾಯ ಸಿಕ್ಕ ಸಿಕ್ಕ ಕಡೆ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ 8 ವರ್ಷದ ತೊನ್ಸಿಂಗ್ ಹ್ಯಾಂಗ್ಸಿಂಗ್ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಮಗನನ್ನು ಆ್ಯಂಬುಲೆನ್ಸ್ ಮೂಲಕ ತಾಯಿ ಆಸ್ಪತ್ರೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ದಾರಿ ಮಧ್ಯೆ ತಡೆದ ಪ್ರತಿಭಟನಕಾರರು ಆ್ಯಂಬುಲೆನ್ಸ್ ಸುಟ್ಟಿದ್ದಾರೆ. ಪರಿಣಾಮ ತಾಯಿ ಹಾಗೂ ಮಗ ಜೀವಂತ ದಹನವಾಗಿದ್ದಾರೆ.
ಅಸ್ಸಾಂ ರೈಫಲ್ಸ್ ಪರಿಹಾರ ಶಿಬಿರದಲ್ಲಿದ್ದ ಈ ಬಾಲಕ ಶಿಬಿರದಿಂದ ಹೊರಬಂದ ಬೆನ್ನಲ್ಲೇ ದಾಳಿಯಾಗಿದೆ. ತಕ್ಷಣವೇ ಅಸ್ಸಾಂ ರೈಫಲ್ಸ್ ಅಧಿಕಾರಿಗಳು ಆ್ಯಂಬುಲೆನ್ಸ್ ಮೂಲಕ ಮಗ ಹಾಗೂ ತಾಯಿಯನ್ನು ಕಳುಹಿಸಿಕೊಟ್ಟಿದ್ದಾರೆ. ಕೆಲ ದೂರದ ವರೆಗೆ ಅಸ್ಸಾಂ ರೈಫೈಲ್ಸ್ ಭದ್ರತಾ ವಾಹನ ಬೆಂಗಾವಲಾಗಿ ತೆರಳಿದೆ. ಸೂಕ್ಷ್ಮ ಪ್ರದೇಶ ದಾಟಿದ ಬಳಿಕ ರೈಫೈಲ್ಸ್ ಭದ್ರತಾ ವಾಹನ ಮರಳಿದೆ. ರಾಜ್ಯ ಪೊಲೀಸರಿಗೆ ಮಾಹಿತಿ ನೀಡಿದ ಅಸ್ಸಾಂ ರೈಫೈಲ್ಸ್ ಅಧಿಕಾರಿಗಳು ಭದ್ರತೆ ನೀಡುವಂತೆ ಸೂಚಿಸಿದೆ.
ಮಣಿಪುರ ಹಿಂಸಾಚಾರ ಬಗ್ಗೆ ನ್ಯಾಯಾಂಗ, ಸಿಬಿಐ ತನಿಖೆ: ರಾಜೀವ್‌ಸಿಂಗ್ ನೂತನ ಡಿಜಿಪಿ
ರೈಫೈಲ್ಸ್ ಭದ್ರತಾ ವಾಹನ ಮರಳಿದ ಕೆಲ ಹೊತ್ತಲ್ಲೇ ಈ ಆ್ಯಂಬುಲೆನ್ಸ್ ಮೇಲೆ ದಾಳಿಯಾಗಿದೆ. ಪ್ರತಿಭಟನಾಕಾರರು ಆ್ಯಂಬುಲೆನ್ಸ್ ತಡೆದ ಹಲ್ಲೆ ಮಾಡಿದ್ದಾರೆ. ಬಳಿಕ ಬೆಂಕಿ ಹಚ್ಚಿದ್ದಾರೆ. ತಾಯಿ ಮಗ ಹೊರಬಂದಂತೆ ತಡೆದಿದ್ದಾರೆ. ಬೆಂಕಿಯ ಜ್ವಾಲೆಗೆ ಆ್ಯಂಬುಲೆನ್ಸ್ ಹೊತ್ತಿ ಉರಿದಿದೆ. ಆ್ಯಂಬುಲೆನ್ಸ್‌ನಲ್ಲಿದ್ದ 8 ವರ್ಷದ ಮಗ, ತಾಯಿ ಹಾಗೂ ಮತ್ತೊರ್ವ ಸಂಬಂಧಿ ಸಜೀವ ದಹನವಾಗಿದ್ದಾರೆ.
ಇದಕ್ಕೂ ಮೊದಲು ಕುಕಿ ಸಮುದಾಯದ ಬಂಡುಕೋರರು ಓರ್ವ ಗಡಿ ಭದ್ರತಾ ಪಡೆಯ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದರು. ಇದೇ ವೇಳೆ ಇಬ್ಬರು ಅಸ್ಸಾಂ ರೈಫಲ್ಸ್ ಪಡೆಯ ಸಿಬ್ಬಂದಿಗಳು ಗಾಯಗೊಂಡಿದ್ದರು. ಮಂಗಳವಾರ ಕಾಕ್ಚಿಂಗ್ ಜಿಲ್ಲೆಯ ಸುಂಗ್ನು ಪ್ರದೇಶದ ಸೆರೊನ ಶಾಲೆಯಲ್ಲಿ ಕುಕಿ ಬಂಡುಕೋರರು ಹಾಗೂ ಭದ್ರತಾ ಪಡೆ ಸಿಬ್ಬಂದಿ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಘಟನೆ ನಡೆದಿದೆ. ಸೆರೊನ ಶಾಲೆಯಲ್ಲಿ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಪಡೆಗಳನ್ನು ಗುರಿಯಾಗಿಸಿಕೊಂಡು ಮುಂಜಾನೆ 4.15ರ ಸುಮಾರಿಗೆ ಕುಕಿ ದುಷ್ಕರ್ಮಿಗಳು ಭಾರಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರು ಬಲಿ; ಸೇನೆಯಿಂದ 40 ಕ್ಕೂ ಹೆಚ್ಚು ಉಗ್ರರ ಹತ್ಯೆ!
ಈ ವೇಳೆ ಗಾಯಗೊಂಡಿದ್ದ ಪೇದೆ ರಂಜಿತ್ ಯಾದವ್‌ರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಸತತ ಎರಡು ದಿನಗಳ ರಾತ್ರಿ ಭದ್ರತಾ ಪಡೆ ಮತ್ತು ಕುಕಿ ಬಂಡುಕೋರರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.