ಮಣಿಪುರದಲ್ಲಿ ರಾಜಕೀಯ ಕ್ರಾಂತಿ, ಮುಖ್ಯಮಂತ್ರಿ ಬೀರೆನ್ ಸಿಂಗ್ ರಾಜೀನಾಮೆ
ಮಣಿಪುರ ಬಿಜೆಪಿಯಲ್ಲಿ ರಾಜಕೀಯ ಕ್ಷಿಪ್ರ ಬೆಳವಣಿಗೆ ನಡೆದಿದೆ. ಬಿಜೆಪಿ ಆತಂರಿಕ ಸಂಘರ್ಷ, ಎನ್‌ಡಿಎ ಮಿತ್ರ ಪಕ್ಷಗಳ ಬೆಂಬಲ ವಾಪಸ್‌ನಿಂದ ಮುಖ್ಯಮಂತ್ರಿ ಬಿರೆನ್ ಸಿಂಗ್ ದಿಢೀರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ.

ಇಂಪಾಲ್(ಫೆ.09) ಭಾರಿ ಹಿಂಸಾಚಾರದ ಮೂಲಕ ವಿಶ್ವದಲ್ಲಿ ಸುದ್ದಿಯಾಗಿದ್ದ ಮಣಿಪುರ ಇದೀಗ ರಾಜಕೀಯ ಕ್ಷಿಪ್ರ ಕ್ರಾಂತಿಯಿಂದ ಮತ್ತೆ ಸುದ್ದಿಯಾಗಿದೆ. ಮಣಿಪುರ ಮುಖ್ಯಮಂತ್ರಿ ಬಿರೆನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಬಲ್ಲಾ ಭೇಟಿಯಾದ ಬಿರೆನ್ ಸಿಂಗ್ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಮಣಿಪುರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದಕ್ಕೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಕೆಲ ಪ್ರಮುಖ ವಿಷಯಗಳನ್ನು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರ ಹಲವು ಯೋಜನಗಳನ್ನು ಮಣಿಪುರದಲ್ಲಿ ಜಾರಿಗೊಳಿಸಿದೆ. ಮಣಿಪುರದ ಅಭಿವೃದ್ಧಿ, ಜನರ ಸುರಕ್ಷತೆ ವಿಚಾರದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡು ಕೆಲಸ ಮಾಡಿದ್ದೇವೆ. ಈ ಪೈಕಿ ಕೆಲ ಯೋಜನೆಗಳನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ ಎಂದು ಬಿರೆನ್ ಸಿಂಗ್ ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ.
ಆಗಿದ್ದು ಅಯ್ತು, ಸಹಬಾಳ್ವೆ ನಡೆಸಿ: ಮಣಿಪುರ ಹಿಂಸಾಚಾರಕ್ಕೆ ಕ್ಷಮೆ ಯಾಚಿಸಿದ ಸಿಎಂ ಬಿರೇನ್ ಸಿಂಗ್
ಮಣಿಪುರದ ಸಂಸ್ಕೃತಿ, ಆಚಾರ ವಿಚಾರ, ಪದ್ಧತಿಗಳನ್ನು ಗೌರವಿಸಿ ಸೂಕ್ತ ಸ್ಥಾನ ಮಾನ ಕಲ್ಪಿಸಲಾಗಿದೆ. ಜೊತೆಗೆ ಮಣಿಪರದ ಶ್ರೀಮಂತ ಸಂಸ್ಕೃತಿಯನ್ನು ಮುಂದುವರಿಸುವ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ಗಡಿ ಮೂಲಕ ಅಕ್ರಮವಾಗಿ ನುಸುಳುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಳಾಗಿದೆ. ಜೊತೆಗೆ ಹೀಗೆ ಬಂಧಿಸಿದ ಆರೋಪಿಗಳನ್ನು ಗಡೀಪಾರು ಮಾಡುವ ಕಟ್ಟು ನಿಟ್ಟಿನ ನೀತಿಯನ್ನು ಜಾರಿಗೊಳಿಸಲಾಗಿದೆ. ಮಾದಕ ದ್ರವ್ಯಗಳ ವಿರುದ್ಧ ಮತ್ತಷ್ಟು ಶಕ್ತಿಯುತವಾಗಿ ಹೋರಾಡಿದ್ದೇವೆ. ಈ ಪೈಕಿ ಹಲವು ಜಾಲಗಳನ್ನು ಪತ್ತೆ ಹಚ್ಚಿಸಿ ಬಂಧಿಸಲಾಗಿದೆ. ಬಯೋಮೆಟ್ರಿಕ್ ಸೇರಿದಂತೆ ನಾಗರೀಕ ಸುರಕ್ಷತಾ ವಿಧಾನಗಳನ್ನು ಜಾರಿ ಮಾಡಲಾಗಿದೆ. ಗಡಿಯಲ್ಲಿ ತಡೆಗೋಡೆ ಸೇರಿದಂತೆ ಇತರ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿದೆ ಎಂದು ಬಿರೆನ್ ಸಿಂಗ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಣಿಪುರ ಹಿಂಸಾಚಾರ ವೇಳೆ ಬಿರೆನ್ ಸಿಂಗ್ ಪ್ರತಿಪಕ್ಷ ಸೇರಿದಂತೆ ದೇಶಾದ್ಯಂತ ಭಾರಿ ಪ್ರತಿಭಟನೆ ಎದುರಿಸಿದ್ದರು. ಮಣಿಪುರ ಅಮಾಯಕ ಜನರ ಪ್ರಾಣ ಉಳಿಸಲು ಮುಖ್ಯಮಂತ್ರಿ ಬಿರೆನ್ ಸಿಂಗ್ ಮುಂದಾಗಿಲ್ಲ, ಮಣಿಪುರ ಹಿಂಸಾಚಾರದಲ್ಲಿ ಮುಖ್ಯಮಂತ್ರಿ ಪಾತ್ರ ಸೇರಿದಂತೆ ಹಲವು ಆರೋಪಗಳು ಬೀರೆನ್ ಸಿಂಗ್ ಮೇಲೆ ಕೇಳಿಬಂದಿದೆ. ಸಂಸತ್ತಿನಲ್ಲಿ ಮೋದಿ ಸರ್ಕಾರಕ್ಕೂ ಮಣಿಪುರ ಹಿಂಸಾಚಾರ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಈ ಹಿಂಸಾಚಾರದ ನಡುವೆ ಬಿರೆನ್ ಸಿಂಗ್ ರಾಜೀನಾಮೆಗೆ ಮುಂದಾಗಿದ್ದರು. ಆದರೆ ಹಿಂಸಾಚಾರ ನಡೆಯುತ್ತಿರುವ ವೇಳೆ ರಾಜೀನಾಮೆ ನೀಡಿದರೆ ಪಲಾಯಾನ ಮಾಡಿದ ಅಪವಾದ ಬರಲಿದೆ ಎಂದು ಬಿಜೆಪಿ ಮನ ಒಲಿಸಿತ್ತು. ಹೀಗಾಗಿ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿದ ಬಿರೆನ್ ಸಿಂಗ್ ಮಣಿಪುರದ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಆದರೆ ಈಗಲೂ ಮಣಿಪುರ ಸಂಪೂರ್ಣ ಶಾಂತವಾಗಿಲ್ಲ.
ಮಣಿಪುರದ ಬಿಜೆಪಿಯಲ್ಲಿ ಆತಂರಿಕ ಬಡಿದಾಟ ಜೋರಾಗಿದೆ. ಮಣಿಪುರ ಹಿಂಸಾಚಾರ ವಿಚಾರದಲ್ಲಿ ಆರಂಭಗೊಂಡ ಬಂಡಾಯ ಇದೀಗ ಬಿರೆನ್ ಸಿಂಗ್ ವಿರುದ್ದ ತೀವ್ರವಾಗಿ ನಡೆದಿತ್ತು. ಇತ್ತ ಮಣಿಪುರ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಪ್ರಾದೇಶಿಕ ಪಕ್ಷ ಬೆಂಬಲ ವಾಪಸ್ ಪಡೆಯುವ ಎಚ್ಚರಿಕೆ ನೀಡಿತ್ತು. ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಬಿರೆನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಬಿರೆನ್ ಸಿಂಗ್ ರಾಜೀನಾಮೆ ನೀಡುತ್ತಿದ್ದಂತೆ ಭದ್ರತಾ ಪಡೆಗಳು ಹೈ ಅಲರ್ಟ್ ಆಗಿದೆ. ಹಿಂಸಾಚಾರ ಸಾಧ್ಯತೆ ಹೆಚ್ಚಿರುವ ಕಾರಣ ಎಲ್ಲೆಡೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಅರೆ ಸೇನಾ ಪಡೆ ನೆರವು ಪಡೆಯಲಾಗಿದೆ. ಹಲವು ಗುಂಪುಗಳಿಂದ ಹಿಂಸಾಚಾರ ಸಾಧ್ಯತೆ ಇರುವ ಕಾರಣ ಈ ರಾಜಕೀಯ ಬೆಳವಣಿಗೆ ಮತ್ತೊಮ್ಮೆ ಮಣಿಪುರದಲ್ಲಿ ಹಿಂಸಾಚಾರಕ್ಕೆ ಸಾಧ್ಯತೆ ನೀಡಲಿದೆ. ಹೀಗಾಗಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ.
ಮಣಿಪುರ: ರಾಷ್ಟ್ರಮಟ್ಟದಲ್ಲಿನ ಎನ್‌ಡಿಎ ಅಂಗಪಕ್ಷವಾದ ಜೆಡಿಯು ಬೆಂಬಲ ವಾಪಸ್ ‘ಹೈಡ್ರಾಮ’