* ಝಾಕಿರ್‌, ಐಎಸ್‌ಐ ವಿಡಿಯೋ ಪತ್ತೆ* ಗೋರಖನಾಥ ದಾಳಿಕೋರನ ಬಳಿ* ಉಗ್ರ ದಾಳಿಯ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ* ಮುಂಬೈಗೆ ತೆರಳಿ ಪೊಲೀಸರಿಂದ ಪರಿಶೀಲನೆ

ಲಖನೌ(ಏ.06): ಉತ್ತರ ಪ್ರದೇಶದ ಪ್ರಸಿದ್ಧ ಗೋರಖನಾಥ ದೇಗುಲ ಮೇಲೆ ದಾಳಿ ನಡೆಸಿದ ಅಹ್ಮದ್‌ ಮುರ್ತಜಾ ಅಬ್ಬಾಸಿ ಲ್ಯಾಪ್‌ಟಾಪ್‌ನಲ್ಲಿ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ್ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಹಲವು ವಿಡಿಯೋಗಳು ಪತ್ತೆಯಾಗಿವೆ. ಹೀಗಾಗಿ ದಾಳಿಯ ಹಿಂದೆ ಉಗ್ರ ಕೃತ್ಯ ಶಂಕೆಗೆ ಮತ್ತಷ್ಟುಬಲಬಂದಂತೆ ಆಗಿದೆ.

ಅಬ್ಬಾಸಿ ಮನೆ ಮೇಲೆ ನಡೆಸಿದ ದಾಳಿಯ ವೇಳೆ ಪತ್ತೆಯಾದ ಲ್ಯಾಪ್‌ಟಾಪ್‌ನಲ್ಲಿ ಝಾಕಿರ್‌ ಮತ್ತು ಐಎಸ್‌ಐಗೆ ಸೇರಿದ ವಿಡಿಯೋಗಳು ಪತ್ತೆಯಾಗಿವೆ. ಜೊತೆಗೆ ಆತನ ಮನೆಯಲ್ಲಿ ಸಿಕ್ಕ ಆಧಾರ್‌ ಕಾರ್ಡ್‌ನಲ್ಲಿ ನವಿ ಮುಂಬೈನ ವಿಳಾಸ ನೀಡಲಾಗಿದೆ. ಹೀಗಾಗಿ ಎಟಿಎಸ್‌ ತಂಡ ನವಿ ಮುಂಬೈಗೆ ಧಾವಿಸಿ ತನಿಖೆ ಮುಂದುವರೆಸಿದೆ.

ಈ ನಡುವೆ ಅಬ್ಬಾಸಿ ಆಲಿಘರ್ವಾ ಗಡಿಯಿಂದ ನೇಪಾಳಕ್ಕೆ ಪ್ರವೇಶಿಸಿ ನಂತರ ನೇಪಾಳದಿಂದ ವಾಪಸ್‌ ಬರುವಾಗ ಆಲಿಘರ್ವಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿ ತಂದಿದ್ದ. ದೇಗುಲ ದಾಳಿ ವೇಳೆ ಅದೇ ಮಾರಾಕಾಸ್ತ್ರಗಳನ್ನು ಬಳಸಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಪ್ರಕರಣ ಸಂಬಂಧ ಎಟಿಎಸ್‌ ಅಬ್ಬಾಸಿಯ ಪ್ರಯಾಣ ಇತಿಹಾಸದ ಕುರಿತು ತನಿಖೆ ನಡೆಸಿ ಆತನ ಪತ್ನಿ ಮತ್ತು ಕುಟುಂಬದವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಈ ನಡುವೆ ಪ್ರಕರಣ ಸಂಬಂಧ ಮಂಗಳವಾರ ಮಹಾರಾಜಗಂಜಿಯ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ಅಬ್ಬಾಸಿ ಭಾನುವಾರ ರಾತ್ರಿ ಕೈಯಲ್ಲಿ ಮಚ್ಚು ಹಿಡಿದು ಏಕಾಏಕಿ ಧಾರ್ಮಿಕ ಘೋಷಣೆ ಕೂಗುತ್ತಾ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಪ್ರಸಿದ್ಧ ಗೋರಖ್‌ನಾಥ ದೇಗುಲದ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರ ಮೇಲೆ ದಾಳಿ ನಡೆಸಿದ್ದ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಘಟನೆಯನ್ನು ಭಯೋತ್ಪಾದನೆಯ ಕೃತ್ಯ ಎಂದು ಬಣ್ಣಿಸಿರುವ ಉತ್ತರಪ್ರದೇಶದ ಗೃಹ ಸಚಿವಾಲಯ, ಈ ಕುರಿತು ಎಸ್‌ಐಟಿ ತನಿಖೆಗೆ ಆದೇಶಿಸಿತ್ತು.