ಸಾಲ ನೀಡಿದ್ಮೇಲೆ ಸಾಲ ತೀರಿಸುವಂತೆ ಹಿಂದೆ ಬೀಳುವ ಬ್ಯಾಂಕ್ ಗಳು ತಮ್ಮ ಕೆಲ್ಸವನ್ನು ಸರಿಯಾಗಿ ಮಾಡಿಲ್ಲ ಅಂದ್ರೆ ತೊಂದ್ರೆ ತಪ್ಪಿದ್ದಲ್ಲ. ಸಾಲ ತೀರಿಸಿದ್ರೂ ದಾಖಲೆ ಅಪ್ಡೇಟ್ ಮಾಡದ ಬ್ಯಾಂಕ್ ಗೆ ಈಗ ಭಾರೀ ತಂಡ ಕಟ್ಟುವಂತಾಗಿದೆ.
ಸಾಲವಿಲ್ದೆ ಜೀವನ ಮಾಡೋದು ಕಷ್ಟ. ಮನೆ, ವಾಹನ ಖರೀದಿಯಿಂದ ಹಿಡಿದು ಶಿಕ್ಷಣದವರೆಗೆ ಎಲ್ಲದಕ್ಕೂ ಸಾಲ ಮಾಡುವ ಸ್ಥಿತಿ ಈಗಿದೆ. ಲೋನ್ ಮಾಡಿದ ಅನೇಕ ಶ್ರೀಮಂತರು ಅದನ್ನು ತೀರಿಸದೆ ಬ್ಯಾಂಕ್ ಗೆ ಮೋಸ ಮಾಡೋದಿದೆ. ಆದ್ರೆ ಬ್ಯಾಂಕ್ ಮಧ್ಯಮವರ್ಗ, ಬಡವರನ್ನು ಬಿಡೋದಿಲ್ಲ. ಸಾಲ ತೀರಿಸುವವರಿಗೂ ಅವರನ್ನು ಕಾಡುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಸಾಲವನ್ನು ಸಂಪೂರ್ಣವಾಗಿ ತೀರಿಸಿದ್ರೂ ಬ್ಯಾಂಕ್ ಮಾಡಿದ ತಪ್ಪಿನಿಂದ ಲಾಭ ಪಡೆದಿದ್ದಾನೆ.
ಏನಿದು ಪ್ರಕರಣ?
ಹೈದರಾಬಾದ್ ನಿವಾಸಿ 67 ವರ್ಷದ ರಾಮ್ ರೆಡ್ಡಿ ಅವರು 2013ರ ಡಿಸೆಂಬರ್ 21ರಂದು ತೆಲಂಗಾಣ ಗ್ರಾಮೀಣ ಬ್ಯಾಂಕ್ನಿಂದ 8 ಲಕ್ಷ ರೂಪಾಯಿ ಶಿಕ್ಷಣ ಸಾಲ ಪಡೆದಿದ್ದರು. ತಮ್ಮ ಮಗನ ವಿದ್ಯಾಭ್ಯಾಸದ ಖರ್ಚಿಗಾಗಿ ಈ ಸಾಲವನ್ನು ಪಡೆದಿದ್ದ ಅವರು, ಇದಕ್ಕಾಗಿ ತಮ್ಮ ಮನೆಯನ್ನು ಬ್ಯಾಂಕ್ನಲ್ಲಿ ಅಡಮಾನ ಇಟ್ಟಿದ್ದರು. ಮನೆಯ ಮೂಲ ದಾಖಲೆಗಳನ್ನೂ ಬ್ಯಾಂಕ್ಗೆ ನೀಡಿದ್ದರು. ಆದರೆ ಸಾಲ ಪಡೆದ ರಾಮ್ ರೆಡ್ಡಿ ಅವರು ಬ್ಯಾಂಕ್ಗೆ ಯಾವುದೇ ಬಾಕಿ ಉಳಿಸಿಕೊಳ್ಳಲಿಲ್ಲ. ಕೇವಲ ಮೂರು ವರ್ಷಗಳಲ್ಲೇ ಅಂದರೆ 2016ರ ಸೆಪ್ಟೆಂಬರ್ 1ರಂದು ಸಂಪೂರ್ಣ ಸಾಲದ ಮೊತ್ತವನ್ನು ಮರುಪಾವತಿ ಮಾಡಿದ್ದರು. ಬಳಿಕ ಬ್ಯಾಂಕ್ ಕೂಡ ಅವರ ಮನೆಯ ದಾಖಲೆಗಳನ್ನು ವಾಪಸ್ ನೀಡಿತ್ತು. ಆದರೆ ಇಲ್ಲಿಯೇ ಬ್ಯಾಂಕ್ ಒಂದು ದೊಡ್ಡ ತಪ್ಪು ಮಾಡಿತ್ತು. ಈ ತಪ್ಪಿನಿಂದಾಗಿ ರಾಮ್ ರೆಡ್ಡಿ ಅವರು ವರ್ಷಗಳ ಕಾಲ ಸಂಕಷ್ಟ ಅನುಭವಿಸುವಂತಾಯಿತು. ಇದೀಗ ಅದೇ ಬ್ಯಾಂಕ್ ಅವರಿಗೆ 40.30 ಲಕ್ಷ ರೂಪಾಯಿ ಪರಿಹಾರ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.
ಬ್ಯಾಂಕ್ ಮಾಡಿದ ತಪ್ಪೇನು?
ರಾಮ್ ರೆಡ್ಡಿ ಅವರು ಸಾಲದ ಸಂಪೂರ್ಣ ಹಣವನ್ನು ಮರುಪಾವತಿ ಮಾಡಿದ ಬಳಿಕ ಬ್ಯಾಂಕ್ ಮನೆಯ ದಾಖಲೆಗಳನ್ನು ಹಿಂದಿರುಗಿಸಿತ್ತು. ಆದರೆ ಆಸ್ತಿಯನ್ನು ಅಡಮಾನದಿಂದ ಮುಕ್ತಗೊಳಿಸಿರುವುದನ್ನು ದೃಢೀಕರಿಸುವ 'ಮಾರ್ಟ್ಗೇಜ್ ರಿಲೀಸ್ ಡೀಡ್' (Mortgage Release Deed) ಅನ್ನು ನೀಡಿರಲಿಲ್ಲ. ಇದರಿಂದ ಬ್ಯಾಂಕ್ನ ದಾಖಲೆಗಳಲ್ಲಿ ಅವರ ಮನೆ ಇನ್ನೂ ಅಡಮಾನದಲ್ಲೇ ಇರುವುದಾಗಿ ತೋರಿಸುತ್ತಿತ್ತು. 2018ರಲ್ಲಿ ರಾಮ್ ರೆಡ್ಡಿ ಅವರು ತಮ್ಮ ಮನೆಯನ್ನು ಮಾರಾಟ ಮಾಡಲು ಮುಂದಾದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಆಸ್ತಿಯು ಬ್ಯಾಂಕ್ನಲ್ಲಿ ಅಡಮಾನವಾಗಿರುವುದರಿಂದ ಅದರ ನೋಂದಣಿ ಸಾಧ್ಯವಿಲ್ಲ ಎಂದು ತಿಳಿದುಬಂದಿತ್ತು.
ತಮ್ಮ ಸಾಲವನ್ನು ಸಂಪೂರ್ಣವಾಗಿ ತೀರಿಸಿದ್ದರೂ ಮನೆ ಅಡಮಾನದಿಂದ ಮುಕ್ತವಾಗದಿರುವುದನ್ನು ಕಂಡು ರಾಮ್ ರೆಡ್ಡಿ ಅವರು ಬ್ಯಾಂಕ್ಗೆ ಹಲವು ಬಾರಿ ಭೇಟಿ ನೀಡಿದ್ದರು. ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಆದರೆ ಬ್ಯಾಂಕ್ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಕೊನೆಗೆ 2025ರ ಸೆಪ್ಟೆಂಬರ್ 11ರಂದು ಬ್ಯಾಂಕ್ನ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಬ್ಯಾಂಕ್ ಅಧಿಕಾರಿಗಳು ಅಡಮಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಇದಕ್ಕಾಗಿ ಇಬ್ಬರು ಸಾಕ್ಷಿಗಳೊಂದಿಗೆ ಬ್ಯಾಂಕ್ ಶಾಖೆಗೆ ಬರುವಂತೆ ಹಾಗೂ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಭರಿಸುವಂತೆ ಸೂಚಿಸಿದ್ದರು. ಅಲ್ಲದೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಮಯವನ್ನೂ ಕಾಯ್ದಿರಿಸುವಂತೆ ತಿಳಿಸಿದ್ದರು.
ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮೊರೆ ಹೋದ ರಾಮ್ ರೆಡ್ಡಿ
ಬ್ಯಾಂಕ್ನಿಂದ ಮತ್ತೆ ಮತ್ತೆ ತೊಂದರೆ ಅನುಭವಿಸಿದ ರಾಮ್ ರೆಡ್ಡಿ ಅವರು ಕೊನೆಗೆ ಹೈದರಾಬಾದ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (Hyderabad District Consumer Disputes Redressal Commission) ಮೊರೆ ಹೋದರು. ಬ್ಯಾಂಕ್ನ ನಿರ್ಲಕ್ಷ್ಯದಿಂದ ತಮಗಾದ ನಷ್ಟಕ್ಕೆ ಪರಿಹಾರ ನೀಡುವಂತೆ ಒಟ್ಟು 39.75 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ (RBI) 2023ರ ಸೆಪ್ಟೆಂಬರ್ 13ರಂದು ಹೊರಡಿಸಿದ್ದ ಸುತ್ತೋಲೆ ಪ್ರಕಾರ, ಸಾಲದ ಸಂಪೂರ್ಣ ಮರುಪಾವತಿಯಾದ ಬಳಿಕ ಬ್ಯಾಂಕ್ಗಳು ಗ್ರಾಹಕರ ಆಸ್ತಿ ದಾಖಲೆಗಳನ್ನು ಹಿಂದಿರುಗಿಸಬೇಕು ಮತ್ತು ಆಸ್ತಿಯನ್ನು ಅಡಮಾನದಿಂದ ಮುಕ್ತಗೊಳಿಸಬೇಕು. ಒಂದು ವೇಳೆ ಬ್ಯಾಂಕ್ ಈ ನಿಯಮ ಪಾಲಿಸಲು ವಿಫಲವಾದರೆ, ವಿಳಂಬವಾದ ಪ್ರತಿದಿನಕ್ಕೆ 5,000 ರೂಪಾಯಿ ಪರಿಹಾರ ನೀಡಬೇಕಾಗುತ್ತದೆ. ಇದೇ ನಿಯಮದ ಆಧಾರದ ಮೇಲೆ ರಾಮ್ ರೆಡ್ಡಿ ಅವರು 2023ರ ಅಕ್ಟೋಬರ್ 13ರಿಂದ 795 ದಿನಗಳ ವಿಳಂಬಕ್ಕೆ ಪರಿಹಾರ ಲೆಕ್ಕ ಹಾಕಿ 39.75 ಲಕ್ಷ ರೂಪಾಯಿ ಕೇಳಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ವಕ್ಕಂಟಿ ನರಸಿಂಹ ರಾವ್ (Vakkanti Narasimha Rao), ಸದಸ್ಯರಾದ ಪಿ.ವಿ.ಟಿ.ಆರ್. ಜವಾಹರ್ ಬಾಬು ಮತ್ತು ಸುಮಾ ವಾಲಾ ಅವರು ಬ್ಯಾಂಕ್ನ ತಪ್ಪನ್ನು ಗುರುತಿಸಿದ್ದಾರೆ. ಸಾಲದ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡಿದ ಬಳಿಕವೂ ಆಸ್ತಿಯನ್ನು ಅಡಮಾನದಿಂದ ಮುಕ್ತಗೊಳಿಸದಿರುವುದು ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಹೀಗಾಗಿ ಬ್ಯಾಂಕ್ ಮತ್ತು ಸಂಬಂಧಪಟ್ಟ ಶಾಖಾ ವ್ಯವಸ್ಥಾಪಕರು ರಾಮ್ ರೆಡ್ಡಿ ಅವರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ವಿಳಂಬಕ್ಕಾಗಿ 39.75 ಲಕ್ಷ ರೂಪಾಯಿ, ಮಾನಸಿಕ ತೊಂದರೆಗಾಗಿ 50,000 ರೂಪಾಯಿ ಮತ್ತು ಕಾನೂನು ಹೋರಾಟದ ವೆಚ್ಚವಾಗಿ 5,000 ರೂಪಾಯಿಯನ್ನು ಬ್ಯಾಂಕ್ ನೀಡಬೇಕಿದೆ.















