ನ್ಯೂ ತೆಹ್ರಿ(ಏ.06): ಶಿಕಾರಿಗೆಂದು ಕಾಡಿಗೆ ತೆರಳಿದ ವೇಳೆ ತಮ್ಮ ಸ್ನೇಹಿತ ತಮ್ಮ ಗುಂಡಿಗೆ ಬಲಿಯಾಗಿದ್ದರಿಂದ ನೊಂದ ಇತರೆ ಮೂವರು ಸ್ನೇಹಿತರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಉತ್ತರಾಖಂಡದ ನ್ಯೂತೆಹ್ರಿ ಜಿಲ್ಲೆಯಲ್ಲಿ ನಡೆದಿದೆ.

ಕುಂದಿ ಗ್ರಾಮದ 7 ಯುವಕರು ಶನಿವಾರ ರಾತ್ರಿ ಬೇಟೆಗೆಂದು ಹತ್ತಿರದ ಅರಣ್ಯಕ್ಕೆ ತೆರಳಿದ್ದರು. ಈ ವೇಳೆ ಗನ್‌ ಹಿಡಿದು ಹೆಜ್ಜೆ ಹಾಕುತ್ತಿದ್ದ ರಾಜೀವ್‌(22) ಎಂಬಾತ ಕಾಲು ಜಾರಿ ಬಿದ್ದಿದ್ದು, ಈ ವೇಳೆ ಅಚಾತುರ್ಯವಾಗಿ ಗನ್‌ನ ಟ್ರಿಗರ್‌ ಅದುಮಿದಿದ್ದಾನೆ. ಈ ವೇಳೆ ಬಂದೂಕಿನಿಂದ ಹೊರ ಚಿಮ್ಮಿದ ಗುಂಡು ಸಂತೋಷ್‌ ಎಂಬಾತನಿಗೆ ತಾಗಿ ಆತ ಸಾವನ್ನಪ್ಪಿದ್ದಾನೆ. ಈ ವೇಳೆ ಭಯಭೀತನಾದ ರಾಜೀವ್‌ ಗನ್‌ ಸಮೇತ ಪರಾರಿಯಾಗಿದ್ದಾನೆ. ಆದರೆ ಘಟನೆಗೆ ತಾವೇ ಕಾರಣ ಎಂದು ನೊಂದ ಇತರೆ ಮೂವರು ಸ್ನೇಹಿತರಾದ ಸೋಬನ್‌, ಪಂಕಜ್‌, ಅರ್ಜುನ್‌ ಗ್ರಾಮಕ್ಕೆ ಮರಳಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಯ ವಿವರವನ್ನು ರಾಹುಲ್‌ ಮತ್ತು ಸುಮಿತ್‌ ಎಂಬುವರಿಂದ ಪಡೆದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ, ವಿಷ ಸೇವಿಸಿದ ಮೂವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಯತ್ನಿಸಿದ್ದು, ಅಷ್ಟೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಜಿಲ್ಲಾ ಮ್ಯಾಜಿಸ್ಪ್ರೇಟ್‌ ತಿಳಿಸಿದ್ದಾರೆ.