ಲಕ್ನೋ[ಡಿ.19]: ದೇಶದಲ್ಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಜೊತೆಗೆ ಅತ್ಯಾಚಾರ ಸಂತ್ರಸ್ತೆಯನ್ನು ಹೀನಾಯವಾಗಿ ನಡೆಸಿಕೊಳ್ಳುವ ಘಟನೆಗಳೂ ವರದಿಯಾಗುತ್ತಿವೆ. ಿದಕ್ಕೆ ಸಾಕ್ಷಿ ಎಂಬಂತೆ ತಂದೆಯೊಬ್ಬ ರೇಪ್ ಆದ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಹೀಲ್ ಚೇರ್ ಸಿಗದೇ ತನ್ನ ಬೆನ್ನ ಮೇಲೆ ಹೊತ್ತೊಯ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು ಉತ್ತರ ಪ್ರದೇಶದಲ್ಲಿ ಇಂತಹ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. 19 ವರ್ಷದ ಯುವಕನೊಬ್ಬ ತನ್ನ ನೆರೆಮನೆಯ 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರಕ್ಕೀಡಾದ ಬಾಲಕಿ ಅದೇಗೋ ಆ ತ್ಯಾಚಾರಿಯ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಯಶಸ್ವಿಯಾಗಿದ್ದು, ಅಲ್ಲಿಂದ ಹೊರಗೋಡಿದ್ದಾಳೆ. ಆದರೆ ಓಡುವ ಭರದಲ್ಲಿ ಬಿದ್ದು, ಕಾಲು ಮುರಿದುಕೊಂಡಿದ್ದಾಳೆ. 

ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿ ಜಿತೇಂದ್ರ ಭದೌರಿಯಾ ಪ್ರತಿಕ್ರಿಯಿಸಿದ್ದು 'ಡಿಸೆಂಬರ್ 14ರಂದು FIR ಒಂದು ದಾಖಲಾಗಿತ್ತು. ಇದರ ಅನ್ವಯ ನಾವು ಆರೋಪಿ ಅಂಕಿತ್ ಯಾದವ್ ನನ್ನು ಬಂಧಿಸಿದ್ದೇವೆ' ಎಂದಿದ್ದಾರೆ.

ಇತ್ತ ಸಂತ್ರಸ್ತ ಬಾಲಕಿಯನ್ನು ಕೋರ್ಟ್ ಗೆ ಹಾಜರುಪಡಿಸಿದ ಬಳಿಕ ವೈದ್ಯಕೀಯ ಪರೀಕ್ಷೆಗೆಂದು ಕಳುಹಿಸಲಾಗಿದೆ. ಜಿಲ್ಲಾ ಆಸ್ಪತ್ರೆಯೊಳಗೆ ನಿರ್ಮಿಸಿದ್ದ ವನ್ ಸ್ಟಾಪ್ ಸೆಂಟರ್ ಸಂತ್ರಸ್ತೆಯೊಂದಿಗೆ ತಂದೆ ಹಾಗೂ ಓರ್ವ ಮಹಿಳಾ ಕಾನ್ಸ್ಟೇಬಲ್ ತೆರಳಿದ್ದರು. ಅಲ್ಲಿಂದ ಸಂತ್ರಸ್ತ ಬಾಲಕಿಯನ್ನು ಮಹಿಳಾ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಆದರೆ ಈ ವೇಳೆ ಆಸ್ಪತ್ರೆ ಸಿಬ್ಬಂದಿ ಸ್ಟ್ರೆಚರ್ ಹಗೂ ವ್ಹೀಲ್ ಚೇರ್ ನೀಡಲು ನಿರಾಕರಿಸಿದ್ದಾರೆ. ಬೇರೆ ದಾರಿ ಕಾಣದ ತಂದೆ ಮಗಳನ್ನು ಬೆನ್ನ ಮೇಲೆ ಹೊತ್ತೊಯ್ದಿದ್ದಾರೆ. 

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಿದ್ದರೂ ಆಡಳಿತ ವರ್ಗ ಯಾವೊಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಸಾಲದೆಂಬಂತೆ ಜಿಲ್ಲಾಸ್ಪತ್ರೆಯ ವೈದ್ಯ ಅಜಯ್ ಅಗರ್ ವಾಲ್ ಪ್ರತಿಕ್ರಿಯಿಸುತ್ತಾ 'ಆ ಸೆಂಟರ್ ಇತ್ತೀಚೆಗಷ್ಟೇ ಆರಂಭವಾಗಿದೆ. ಅಲ್ಲಿ ಸ್ಟ್ರೆಚರ್ ಮೊದಲಾದ ಸೌಲಭ್ಯವಿಲ್ಲ. ಈ ಎಲ್ಲಾ ಸೌಲಭ್ಯ ಒದಗಿಸುವಂತೆ ನಾವು ಈಗಾಗಲೇ ಪತ್ರ ಬರೆದಿದ್ದೇವೆ' ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ