ನವದೆಹಲಿ/ಕೋಲ್ಕತಾ(ಮಾ.29): ಪಶ್ಚಿಮ ಬಂಗಾಳದ ಮೊದಲ ಹಂತದ ಚುನಾವಣೆಯಲ್ಲಿ 30 ಸ್ಥಾನಗಳ ಪೈಕಿ ಬಿಜೆಪಿ 26ರಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಅಸ್ಸಾಂನ 47 ಸ್ಥಾನಗಳ ಪೈಕಿ ಬಿಜೆಪಿ 37ರಲ್ಲಿ ಗೆಲುವು ದಾಖಲಿಸಲಿದೆ ಎಂದು ಗೃಹ ಸಚಿವ ಅಮಿತ್‌ ಶಾ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅಮಿತ್‌ ಶಾ ತಮಗೆ ಲಭ್ಯವಾಗಿರುವ ಪಕ್ಷದ ಆಂತರಿಕ ಮಾಹಿತಿಯ ಪ್ರಕಾರ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ 200ಕ್ಕೂ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಅಸ್ಸಾಂನಲ್ಲಿ ಬಿಜೆಪಿ 86 ಸೀಟುಗಳನ್ನು ಗೆದ್ದು ಅಧಿಕಾರ ಹಿಡಿಯಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಅಮಿತ್‌ ಶಾ ಹೇಳಿಕೆಗೆ ಪಶ್ಚಿಮ ಬಂಗಾಳದ ಚಂಡೀಪುರ ಕ್ಷೇತ್ರದಲ್ಲಿ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಇನ್ನೂ ನಾಲ್ಕು ಕ್ಷೇತ್ರಗಳನ್ನು ಕಾಂಗ್ರೆಸ್‌ ಮತ್ತು ಸಿಪಿಎಂಗೆ ಬಿಟ್ಟುಕೊಟ್ಟಿದ್ದಾರಾ?’ ಎಂದು ಲೇವಡಿ ಮಾಡಿದ್ದಾರೆ. ಚುನಾವಣೆ ಮುಕ್ತಾಯವಾಗಿ ಮತಗಳ ಎಣಿಕೆ ಬಳಿಕ ಮತದಾರ ಪ್ರಭುಗಳ ತೀರ್ಪು ಏನೆಂದು ಸ್ಪಷ್ಟವಾಗಲಿದೆ. ಶನಿವಾರದ ಚುನಾವಣಾ ಮತದಾನದಲ್ಲಿ ಶೇ.84ರಷ್ಟುಮತದಾನವಾಗಿದ್ದು, ನಮ್ಮ ಪರವಾಗಿಯೇ ಜನ ಮತ ಹಾಕಿರಲಿದ್ದಾರೆ ಎಂಬ ಭರವಸೆಯಿದೆ ಎಂದು ಹೇಳಿದ್ದಾರೆ.