ಇದು ಮಮತೆಯ ತಿರುವು: ಸಿಎಎ ವಿರೋಧಿಗಳಿಂದ ದೂರದ ಕುರುಹು!
ಸಿಎಎ ವಿರೋಧಿ ಬಣದಿಂದ ದೂರ ಸರಿದ ಮಮತಾ| ಸಿಎಎ ವಿರೋಧಿ ವಿಪಕ್ಷ ಸಭೆಗೆ ಹಾಜರಾಗದಿರುವ ನಿರ್ಣಯ| ಕಾಂಗ್ರೆಸ್-ಎಡಪಕ್ಷಗಳಿಂದ ಡರ್ಟಿ ಪೊಲಿಟಿಕ್ಸ್ ಎಂದ ಪ.ಬಂಗಾಳ ಸಿಎಂ| 'ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಏಕಾಂಗಿ ಹೋರಾಟ'| ಮೋದಿ ಎದುರಿಸಲು ನಾನೊಬ್ಬಳೇ ಸಾಕು ಎಂದ ದೀದಿ|
ಪ.ಬಂಗಾಳ(ಜ.09): ರಾಜಕಾರಣವಲ್ಲದೇ ಮತ್ತಿನ್ನೇನ್ನು ತಾನೆ ತಿರುವು ಪಡೆಯಲು ಸಾಧ್ಯ. ಚಲಿಸುವುದೆಲ್ಲಾ ತಿರುಗಲೇಬೇಕು. ಇದು ಸದ್ಯ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅನ್ವಯ.
ಮೋದಿ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ಕಡು ವಿರೋಧಿ ನೇತಾರರಲ್ಲಿ ಒಬ್ವರಾದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇದೇ ಧ್ವನಿಯ ವಿಪಕ್ಷ ನಾಯಕರಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.
ಹೌದು ಇದೇ ಜ.13(ಸೋಮವಾರ)ರಂದು ಕಾಂಗ್ರೆಸ್ ಹಾಗೂ ಎಡಪಕ್ಷಗಳ ನೇತೃತ್ವದ ವಿಪಕ್ಷ ಸಭೆಗೆ ಹಾಜರಾಗುವುದಿಲ್ಲ ಎಂದು ಮಮತಾ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.
ಚಿಕಾಗೋದಲ್ಲಿ ಮೊಳಗಿದ ಸಿಎಎ ಪರ ಧ್ವನಿ: ಅನಿವಾಸಿ ಭಾರತೀಯರಿಂದ ಮೆರವಣಿಗೆ!
ಸಿಎಎ ಕುರಿತು ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕೊಳಕು ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿರುವ ಮಮತಾ, ವಿಪಕ್ಷಗಳ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಏಕಾಂಗಿ ಹೋರಾಟ ನಡೆಸಲು ತಾನು ಸಶಕ್ತಳಾಗಿದ್ದೇನೆ, ಕೊಳಕು ರಾಜಕಾರಣ ಮಾಡುವುವರ ಸಹಾಯ ತಮಗೆ ಬೇಕಿಲ್ಲ ಎಂದು ಮಮತಾ ಗುಡುಗಿದ್ದಾರೆ.
ರಾಜ್ಯದಲ್ಲಿ ನಿನ್ನೆ ನಡೆದ ಕಹಿ ಘಟನೆಗಳಿಗೆ(ಬಿಜೆಪಿ ಸಂಸದ ಸ್ವಪನ್‌ದಾಸ್ ಗುಪ್ತಾ ಮೇಲಿನ ಹಲ್ಲೆ, ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಹಿಂಸಾತ್ಮಕ ಹೋರಾಟ, ಭಾರತ್ ಬಂದ್ ವೇಳೆ ನಡೆದ ಹಿಂಸಾಚಾರ) ಕಾಂಗ್ರೆಸ್ ಹಾಗೂ ಎಡಪಕ್ಷಗಳ ಡರ್ಟಿ ಪೊಲಿಟಿಕ್ಸ್ ಕಾರಣ ಎಂದು ಮಮತಾ ಗಂಭೀರ ಆರೋಪ ಮಾಡಿದ್ದಾರೆ.
ಮೋದಿ ಸರ್ಕಾರದ ನೀತಿಗಳ ವಿರುದ್ಧ ತಾನು ಏಕಾಂಗಿ ಹೋರಾಟ ನಡೆಸಲಿದ್ದು, ಪೌರತ್ವ ಕಾಯ್ದೆ ಜಾರಿ ಸಾಧ್ಯವೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.