ಕೋಲ್ಕತಾ(ಫೆ.26): ಪಶ್ಚಿಮ ಬಂಗಾಳದ ವಿಧಾನ ಸಭೆ ಚುನಾವಣೆ ಮಾರ್ಚ್ 27 ರಿಂದ ಆರಂಭಗೊಳ್ಳಲಿದೆ. ಚುನಾವಣಾ ಆಯೋಗ ಇಂದು ಪಂಚ ರಾಜ್ಯಗಳಿಗೆ ಚುನಾವಣಾ ದಿನಾಂಕ ಘೋಷಿಸಿದೆ. ಇದೇ ಮೊದಲ ಬಾರಿಗೆ ಬಂಗಾಳದಲ್ಲಿ 8 ಹಂತದಲ್ಲಿ ಮತದಾನ ಮಾಡಲು ಆಯೋಗ ನಿರ್ಧರಿಸಿದೆ. ಆದರೆ ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಮಾಧಾನಕ್ಕೆ ಕಾರಣವಾಗಿದೆ.

ಮಾ.27 ರಿಂದ ಎಪ್ರಿಲ್ 29: ಪಂಚರಾಜ್ಯ ಚುನಾವಣಾ ದಿನಾಂಕ ಘೋಷಿಸಿದ ಆಯೋಗ!.

ಮಾರ್ಚ್ 27 ರಿಂದ ಎಪ್ರಿಲ್ 29ರ ವರೆಗೆ ಬಂಗಾಳದಲ್ಲಿ 8 ಹಂತದ ಚುನಾವಣೆ ನಡೆಯಲಿದೆ. 6 ಹಂತದ ಮತದಾನದ ಬದಲು 8 ಹಂತದ ಮತದಾನಕ್ಕೆ ಚುನಾವಣಾ ಆಯೋಗ ನಿರ್ಧರಿಸಿದ್ದೇಕೆ? ಇದರ ಹಿಂದೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕೈವಾಡವಿದೆಯಾ ಎಂದು ದೀದಿ ಪ್ರಶ್ನಿಸಿದ್ದಾರೆ.

ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಒಂದು ಹಂತದ ಮತದಾನ, ಅಸ್ಸಾಂನಲ್ಲಿ 3 ಹಂತದ ಮತದಾನ ನಿರ್ಧರಿಸಲಾಗಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ 8 ಹಂತದ ಮತದಾನಕ್ಕೆ ನಿರ್ಧರಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.  ಬಿಜೆಪಿ ತನ್ನ ಪ್ರಚಾರಕ್ಕೆ ಅನೂಕೂಲವಾಗುವಂತೆ ಮತದಾನ ನಿರ್ಧರಿಸಲಾಗಿದೆ ಎಂದು ಮಮತಾ ಆರೋಪಿಸಿದ್ದಾರೆ.

ಅಸ್ಸಾಂ, ತಮಿಳುನಾಡಿನಲ್ಲಿ ಪ್ರಚಾರ ಮುಗಿಸಿ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡಲು ಬಿಜೆಪಿ ಈ ಪ್ಲಾನ್ ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಲಿದೆ ಎಂದು ಮಮತಾ ಹೇಳಿದ್ದಾರೆ.

2011ರಲ್ಲಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿನ 6 ಹಂತದ ಮತದಾನವನ್ನು ಸ್ವಾಗತಿಸಿದ್ದರು. ಎಡಪಕ್ಷಗಳ ಅಧಿಕಾರ ಅಂತ್ಯಗೊಳಿಸಿ ಬಂಗಾಳದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಕಾಂಗ್ರೆಸ್ ಜೊತೆಗೂಡಿ ತೃಣಮೂಲ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಬ್ಯಾನರ್ಜಿ ಹೇಳಿದ್ದರು. ಇದೀಗ 8 ಹಂತದ ಮತದಾವನ್ನು ದೀದಿ ವಿರೋಧಿಸಿದ್ದಾರೆ.