ಕೊರೋನಾ ತಪಾಸಣೆ ಉಚಿತ| ಸರ್ಕಾರಿ ಅಥವಾ ಖಾಸಗಿ ಲ್ಯಾಬ್‌ಗಳಲ್ಲಿ ಶುಲ್ಕ ಬೇಡ: ಸುಪ್ರೀಂ

ನವದೆಹಲಿ(ಏ.09): ಕೊರೋನಾ ವೈರಸ್‌ ತಪಾಸಣೆಗೆ ಅನುಮತಿ ಪಡೆದಿರುವ ಸರ್ಕಾರಿ ಅಥವಾ ಖಾಸಗಿ ಲ್ಯಾಬ್‌ಗಳು ಉಚಿತವಾಗಿ ತಪಾಸಣೆ ನಡೆಸಲು ಕೇಂದ್ರ ಸರ್ಕಾರ ತಕ್ಷಣವೇ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಬುಧವಾರ ಆದೇಶಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾ| ಅಶೋಕ್‌ ಭೂಷಣ್‌ ಮತ್ತು ಎಸ್‌. ರವೀಂದ್ರ ಭಟ್‌ ಅವರಿದ್ದ ಪೀಠ, ಕೊರೋನಾ ವೈರಸ್‌ ಹರಡುವುದನ್ನು ತಡೆಗಟ್ಟುವಲ್ಲಿ ಪ್ರಯೋಗಾಲಯಗಳ ಪಾತ್ರ ಮಹತ್ವದ್ದಾಗಿದೆ. ರಾಷ್ಟ್ರೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಯೋಗಾಲಯಗಳು ಲೋಕೋಪಕಾರಿ ಸೇವೆಗಳನ್ನು ವಿಸ್ತರಿಸುವುದು ಈ ಸಮಯದ ಅಗತ್ಯವಾಗಿದೆ. ಕೊರೋನಾ ವೈರಸ್‌ಗೆ ಸಂಬಂಧಿಸಿದ ಪರೀಕ್ಷೆಗಳನ್ನು ಅನುಮೋದನೆ ಪಡೆದ ಪ್ರಯೋಗಾಲಯಗಳು ಉಚಿತವಾಗಿ ನಡೆಸಲು ನಿರ್ದೇಶನ ನೀಡಬೇಕು ಎಂದು ತಿಳಿಸಿದೆ.

ಪಿಪಿಇ ಕಿಟ್‌ಗಳ ಕೊರತೆ ಆಗದಿರಲಿ:

ಇದೇ ವೇಳೆ, ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೊದಲ ಸಾಲಿನಲ್ಲಿರುವ ರಕ್ಷಕರಾಗಿದ್ದಾರೆ. ಹೀಗಾಗಿ ಅವರಿಗೆ ಪರ್ಸ್‌ನಲ್‌ ಪ್ರೊಟೆಕ್ಟಿವ್‌ ಇಕ್ವಿಪ್‌ಮೆಂಟ್‌ (ಪಿಪಿಇ) ಕಿಟ್‌ಗಳು ಸಮರ್ಪಕವಾಗಿ ಲಭ್ಯವಿರುವಂತೆ ನೋಡಿಕೊಳ್ಳುವಂತೆ ಸುಪ್ರೀಂಕೋರ್ಟ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ಸುರಕ್ಷತಾ ಕಿಟ್‌ಗಳನ್ನು ಪೂರೈಸುವಂತೆ ನಿರ್ದೇಶನ ನೀಡುವಂತೆ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಈ ಆದೇಶ ಹೊರಡಿಸಿದೆ. ಈ ವೇಳೆ ವೈದ್ಯರ ಮೇಲೆ ಇತ್ತೀಚಿಗೆ ನಡೆದ ಹಲ್ಲೆ ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ವೈದ್ಯರ ಮೇಲೆ ದುರ್ವರ್ತನೆ ತೋರುವವರ ವಿರುದ್ಧ ರಾಜ್ಯ ಸರ್ಕಾರಗಳೂ ಕೂಡ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.