ಶ್ರೀನಗರ(ಅ.11): ಶಸ್ತ್ರಾಸ್ತ್ರ ಸಾಗಣೆಗೆ ಸುರಂಗ ತೋಡಿದ್ದಾಯ್ತು. ಗಡಿ ಬೇಲಿಗೆ ಪಿವಿಸಿ ಪೈಪ್‌ ಹಾಕಿ ಶಸ್ತ್ರಾಸ್ತ್ರ ಸಾಗಣೆ ಮಾಡಲು ಯತ್ನಿಸಿದ್ದಾಯ್ತು. ಇದೀಗ ಉಗ್ರರ ಇನ್ನೊಂದು ವಿಧಾನ ಕೂಡ ಪತ್ತೆಯಾಗಿದೆ. ನದಿಗೆ ಅಡ್ಡಲಾಗಿ ಹಗ್ಗಕಟ್ಟಿಪೈಪ್‌ ಮೂಲಕ ಶಸ್ತ್ರಾಸ್ತ್ರಗಳನ್ನು ಗಡಿಯ ಒಳಕ್ಕೆ ಸಾಗಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಜಮ್ಮು- ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೆರಾನ್‌ ವಲಯದಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಗಡಿಯ ಒಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ಶನಿವಾರ ವಶಪಡಿಸಿಕೊಂಡಿವೆ. ಇಬ್ಬರು- ಮೂವರು ಶಂಕಿತ ಉಗ್ರರು ಕಿಶನ್‌ಗಂಗಾ ನದಿಗೆ ಅಡ್ಡಲಾಗಿ ಹಗ್ಗಕಟ್ಟಿಪೈಪ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಭಾರತದ ಗಡಿಯ ಒಳಕ್ಕೆ ಸಾಗಿಸಲು ಯತ್ನಿಸುತ್ತಿದ್ದದು ಪತ್ತೆಯಾಗಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಯೋಧರು 4 ಎ.ಕೆ. 74 ರೈಫೆಲ್‌ಗಳು, 8 ಮ್ಯಾಗಜಿನ್‌ ಹಾಗೂ 240 ಸುತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಜಮ್ಮು- ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದು, ಈ ವರ್ಷ ಭದ್ರತಾ ಪಡೆಗಳು ಭಾರೀ ಪ್ರಮಾಣದ ಉಗ್ರರ ಒಳನುಸುಳುವಿಕೆಯನ್ನು ವಿಫಲಗೊಳಿಸಿವೆ. ಈ ವರ್ಷ 30ಕ್ಕಿಂತಲೂ ಕಡಿಮೆ ಉಗ್ರರು ದೇಶದ ಗಡಿಯ ಒಳಕ್ಕೆ ನುಸುಳಿದ್ದಾರೆ. ಗುಪ್ತಚರ ವರದಿಯ ಪ್ರಕಾರ ಇನ್ನೂ 250ರಿಂದ 300 ಉಗ್ರರು ಗಡಿಯಲ್ಲಿನ ಲಾಂಚ್‌ ಪ್ಯಾಡ್‌ಗಳಲ್ಲಿ ಅಡಗಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.