4 ವಾರಗಳ ಬದಲು 6 ವಾರಕ್ಕೆ ಮಹಾರಾಷ್ಟ್ರದಲ್ಲಿ 2ನೇ ಡೋಸ್‌!| ಹೆಚ್ಚಿನ ಜನರಿಗೆ ಲಸಿಕೆ ನೀಡಲು ಹೊಸ ಪ್ರಯತ್ನ| ಬ್ರಿಟನ್‌, ಕೆನಡಾ ಮಾದರಿ ಮೊರೆ ಹೋದ ರಾಜ್ಯ

ಮುಂಬೈ(ಜ.17): ಕೊರೋನಾ ಲಸಿಕೆಯ ಮೊದಲ ಡೋಸ್‌ ಪಡೆದ 4 ವಾರಗಳ ಬಳಿಕ 2ನೇ ಡೋಸ್‌ ಸ್ವೀಕರಿಸಬೇಕು. ಆದರೆ ಮಹಾರಾಷ್ಟ್ರ ಸರ್ಕಾರ 2ನೇ ಡೋಸ್‌ ಲಸಿಕೆ ವಿತರಣೆಯನ್ನು ಕೊಂಚ ವಿಳಂಬ ಮಾಡಲು ಮುಂದಾಗಿದೆ. ಹೆಚ್ಚಿನ ಜನರಿಗೆ ಲಸಿಕೆ ವಿತರಣೆ ಮಾಡುವ ಉದ್ದೇಶದಿಂದ 6 ವಾರಗಳ ಬಳಿಕ 2ನೇ ಡೋಸ್‌ ವಿತರಿಸಲು ಹೊರಟಿದೆ. ಈಗಾಗಲೇ ಬ್ರಿಟನ್‌ ಹಾಗೂ ಕೆನಡಾದಲ್ಲಿ ಈ ವಿಳಂಬ ತಂತ್ರ ಅನುಸರಿಸಲಾಗುತ್ತಿದ್ದು, ಅದನ್ನೇ ಪಾಲಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ.

2ನೇ ಡೋಸ್‌ ಲಸಿಕೆಯನ್ನು ವಿಳಂಬ ಮಾಡುವುದರಿಂದ ಹೆಚ್ಚಿನ ಮಂದಿಗೆ ಲಸಿಕೆ ನೀಡಬಹುದಾಗಿದೆ. 2ನೇ ಡೋಸ್‌ಗಾಗಿ ಲಸಿಕೆ ಕಾಯ್ದಿರಿಸುವ ಬದಲಿಗೆ ಅದನ್ನು ಇತರರಿಗೆ ವಿತರಣೆ ಮಾಡಿ, ಮುಂದೆ ಬರುವ ಲಸಿಕೆಗಳನ್ನು 2ನೇ ಡೋಸ್‌ಗೆ ಬಳಸಬಹುದಾಗಿದೆ. 2ನೇ ಡೋಸ್‌ ಲಸಿಕೆ ಮಹಾರಾಷ್ಟ್ರದಲ್ಲಿ ವಿತರಣೆ ವಿಳಂಬವಾಗಲಿದೆ ಎಂಬುದಕ್ಕೆ ಇಂಬು ನೀಡುವಂತೆ ‘2ನೇ ಡೋಸ್‌ ಅನ್ನು 4ರಿಂದ 6 ವಾರಗಳ ಬಳಿಕ ನೀಡಲಾಗುತ್ತದೆ’ ಎಂದು ಮಹಾರಾಷ್ಟ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ವರದಿಗಳು ತಿಳಿಸಿವೆ.

ಕೋವಿಶೀಲ್ಡ್‌ ಲಸಿಕೆಯ 2ನೇ ಡೋಸ್‌ ಅನ್ನು 12 ವಾರಗಳ ಬಳಿಕ ನೀಡಿದರೆ ಅದರ ಪರಿಣಾಮ ಹೆಚ್ಚು ಎಂದು ತಿಳಿದುಬಂದಿದೆ. ಹೀಗಾಗಿ ಮೂರು ತಿಂಗಳ ಬಳಿಕ 2ನೇ ಡೋಸ್‌ ನೀಡಿದರೆ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಅನುಕೂಲವಾಗುತ್ತದೆ ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಗಿರಿಧರ ಬಾಬು ಎಂಬುವರು ತಿಳಿಸಿದ್ದಾರೆ.