ಮುಂಬೈ[ಫೆ.16]: ಭೀಮಾ- ಕೋರೆಗಾಂವ್‌ ಹಿಂಸಾಚಾರದ ಪ್ರಕರಣ ತನಿಖೆಯನ್ನು ಎನ್‌ಐಎಗೆ ವಹಿಸಲು ಅನುಮತಿ ನೀಡಿದ್ದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಎನ್‌ಸಿಪಿ ಕೊತ ಕೊತ ಕುದಿಯುತ್ತಿರುವ ಬೆನ್ನಲ್ಲೇ, ಮಹಾ ಅಘಾಡಿ ವಿಕಾಸ್‌ ಮೈತ್ರಿ ಸರ್ಕಾರದಲ್ಲಿ ಮತ್ತಷ್ಟುಆಕ್ರೋಶ ಭುಗಿಲೇಳುವ ಲಕ್ಷಣಗಳು ಗೋಚರವಾಗುತ್ತಿವೆ.

ತನ್ನ ಮಿತ್ರಪಕ್ಷಗಳಾದ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ವಿರೋಧಿಸಿಕೊಂಡು ಬಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಅನ್ನು ಮೇ 1ರಿಂದ ಜಾರಿಗೆ ತರಲು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನಿರ್ಧರಿಸಿದ್ದಾರೆ. ಈ ಮೂಲಕ ಸಿಎಂ ಉದ್ಧವ್‌ ಅವರು, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ.

ಎನ್‌ಪಿಆರ್‌ ಎಂಬುದು ಎನ್‌ಆರ್‌ಸಿ ಮುಖವಾಡ ಎಂದು ವಾದಿಸಿಕೊಂಡು ಬಂದಿರುವ ಕಾಂಗ್ರೆಸ್‌ ತನ್ನ ಆಳ್ವಿಕೆಯ ರಾಜ್ಯಗಳಲ್ಲಿ ಅದನ್ನು ಜಾರಿಗೆ ಹಿಂದೇಟು ಹಾಕುತ್ತಿದೆ. ಎನ್‌ಪಿಆರ್‌ಗೆ ಸಹಕಾರ ನೀಡುವ ಮಾತೇ ಇಲ್ಲ ಎಂದು ಎನ್‌ಸಿಪಿ ತಿಳಿಸಿದೆ. ಆದಾಗ್ಯೂ ಉದ್ಧವ್‌ ಎನ್‌ಪಿಆರ್‌ ಜಾರಿಗೆ ನಿರ್ಧಾರ ಕೈಗೊಂಡಿದ್ದಾರೆ.

ಎನ್‌ಪಿಆರ್‌ ಎಂಬುದು ಎನ್‌ಆರ್‌ಸಿಯ ಮುಖವಾಡವಷ್ಟೇ ಎಂದು ಕಾಂಗ್ರೆಸ್‌ ಕಿಡಿಕಾರಿದೆ. ಮತ್ತೊಂದು ಮೈತ್ರಿ ಪಕ್ಷವಾದ ಎನ್‌ಸಿಪಿ ಸಹ, ಎನ್‌ಪಿಆರ್‌ಗೆ ಸಹಕಾರ ನೀಡುವ ಮಾತೇ ಇಲ್ಲ ಎಂದು ಕಡ್ಡಿಮುರಿದಂತೆ ತನ್ನ ನಿಲುವು ಸ್ಪಷ್ಟಪಡಿಸಿದೆ. ಆದರೆ, ರಾಜ್ಯದಲ್ಲೂ ಎನ್‌ಪಿಆರ್‌ ಅನ್ನು ಜಾರಿ ಮಾಡಬೇಕು ಎಂಬುದು ಉದ್ಧವ್‌ ಅವರ ಇಂಗಿತವಾಗಿದೆ. ಈ ಹಿನ್ನೆಲೆಯಲ್ಲಿ, ಈ ವಿಚಾರ ಮುಂದಿನ ದಿನಗಳಲ್ಲಿ ಹೇಗೆ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

2019ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟವಾದ ಎನ್‌ಡಿಎ ಸ್ಪಷ್ಟಬಹುಮತ ಸಾಧಿಸಿತ್ತು. ಆದರೆ, ತನಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದ ಬಿಜೆಪಿ ನಿರ್ಧಾರದಿಂದ ರೋಸಿಹೋದ ಶಿವಸೇನೆ, ಎನ್‌ಡಿಎ ಮೈತ್ರಿ ಕಡಿದುಕೊಂಡು ಕಾಂಗ್ರೆಸ್‌-ಎನ್‌ಸಿಪಿ ಜೊತೆಗೂಡಿ ಸರ್ಕಾರ ರಚನೆ ಮಾಡಿತ್ತು. ಆದರೆ, ಇದೀಗ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಿಲುವುಗಳ ವಿರುದ್ಧವೇ ಶಿವಸೇನೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದು ಎನ್‌ಸಿಪಿ ಮತ್ತು ಕಾಂಗ್ರೆಸ್‌ ಆಕ್ರೋಶಕ್ಕೆ ಕಾರಣವಾಗಿದೆ.