ಮುಂಬೈ[ಡಿ.13]: ಮಹಾರಾಷ್ಟ್ರದಲ್ಲಿ ಹಲವು ನಾಟಕೀಯ ಬೆಳವಣಿಗೆಗಳ ನಂತರ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸರ್ಕಾರ ರಚನೆಯಾದ 2 ವಾರಗಳ ಬಳಿಕ ಖಾತೆಗಳ ಹಂಚಿಕೆ ಮಾಡಿದ್ದಾರೆ.

ಶಿವಸೇನೆ, ಪ್ರಬಲ ಖಾತೆಯಾದ ಗೃಹ ಇಲಾಖೆಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಉಳಿದಂತೆ ಆರ್ಥಿಕ ಸಚಿವಾಲಯ, ವಸತಿ, ಸಾರ್ವಜನಿಕ ಆರೋಗ್ಯ, ಸಹಕಾರ ಇಲಾಖೆಗಳು ಎನ್‌ಸಿಪಿ ಪಾಲಾಗಿವೆ. ಇನ್ನು ಮಹಾ ಅಘಾಡಿಯ ಮೈತ್ರಿ ಪಕ್ಷ ಕಾಂಗ್ರೆಸ್‌ಗೆ ಪ್ರಮುಖ ಖಾತೆಗಳಾದ ಇಂಧನ, ಕಂದಾಯ, ಶಿಕ್ಷಣ, ಲೋಕೋಪಯೋಗಿ, ಜವಳಿ ಖಾತೆಗಳು ಒಲಿದುಬಂದಿವೆ. ಚಳಿಗಾಲದ ಅಧಿವೇಶನ ಮುಕ್ತಾಯವಾಗುವ ಡಿ.21ರ ಬಳಿಕ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ನ.28ರಂದು ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಸಚಿವರಾಗಿ ಪದಗ್ರಹಣ ಮಾಡಿದ್ದ ಶಿವಸೇನೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ತಲಾ ಇಬ್ಬರು ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಅದರಂತೆ, ಶಿವಸೇನೆ ನಾಯಕ ಏಕನಾಥ ಶಿಂಧೆ ಅವರಿಗೆ ಗೃಹ, ನಗರಾಭಿವೃದ್ಧಿ, ಅರಣ್ಯ, ಪರಿಸರ, ಜಲ, ಪ್ರವಾಸೋದ್ಯಮ, ಸಂಸದೀಯ ವ್ಯವಹಾರಗಳ ಸಚಿವಾಲಯಗಳು, ಸುಭಾಷ್‌ ದೇಸಾಯಿ ಅವರಿಗೆ ಕೈಗಾರಿಕೆ, ಪ್ರೌಢಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ, ಕ್ರೀಡೆ, ಯುವ ಕಲ್ಯಾಣ, ತೋಟಗಾರಿಕೆ, ಸಾರಿಗೆ, ಮರಾಠಿ ಭಾಷಾ ಮತ್ತು ಸಂಸ್ಕೃತಿ ವ್ಯವಹಾಗಳನ್ನು ನೀಡಲಾಗಿದೆ. ಇನ್ನು ಎನ್‌ಸಿಪಿಯ ಜಯಂತ್‌ ಪಾಟೀಲ್‌ ಅವರು ಆರ್ಥಿಕ ಹಾಗೂ ಯೋಜನೆ, ವಸತಿ, ಸಾರ್ವಜನಿಕ ಆರೋಗ್ಯ, ಸಹಕಾರ, ಆಹಾರ ಮತ್ತು ನಾಗರಿಕ ಪೂರೈಕೆ, ಕಾರ್ಮಿಕ ಹಾಗೂ ಅಲ್ಪಸಂಖ್ಯಾತ ಕಲ್ಯಾಣಗಳ ಸಚಿವಾಲಯವನ್ನು ವಹಿಸಿಕೊಂಡಿದ್ದಾರೆ. ಛಗನ್‌ ಭುಜ್ಬಲ್‌ ಅವರಿಗೆ ಕೃಷಿ, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ, ಅಬಕಾರಿ, ಕೌಶಲ್ಯಾಭಿವೃದ್ಧಿ, ಆಹಾರ ಮತ್ತು ಔಷಧಿ ಇಲಾಖೆಗಳನ್ನು ವಹಿಸಲಾಗಿದೆ.

ಕಾಂಗ್ರೆಸ್‌ನ ಬಾಳಾಸಾಹೇಬ್‌ ಥೋರಟ್‌ ಅವರಿಗೆ ಕಂದಾಯ, ಇಂಧನ, ವೈದ್ಯಕೀಯ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳು ಒಲಿದುಬಂದಿವೆ. ಮತ್ತೋರ್ವ ಕಾಂಗ್ರೆಸ್‌ ನಾಯಕ ನಿತಿನ್‌ ರಾವುತ್‌ಗೆ ಲೋಕೋಪಯೋಗಿ, ಬುಡಕಟ್ಟು ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜವಳಿ, ಪರಿಹಾರ ಮತ್ತು ಪುನರ್ವಸತಿ, ಒಬಿಸಿ ಸೇರಿದಂತೆ ಇನ್ನಿತರ ಖಾತೆ ವಹಿಸಲಾಗಿದೆ.