* ಮಹಾರಾಷ್ಟ್ರದಲ್ಲಿ ಮುಂದುವರೆದ ರಾಜಕೀಯ ಬಿಕ್ಕಟ್ಟು* ಹೈಡ್ರಾಮಾ ನಡುವೆ ವೈರಲ್ ಆಗುತ್ತಿದೆ ಸಂಜಯ್ ರಾವತ್ ಹೇಳಿಕೆ* ಬಂಡಾಯ ನಾಯಕರಿಗೆ ಬಹಿರಂಗ ಬೆದರಿಕೆ ಹಾಕಿದ ರಾವತ್
ಮುಂಬೈ(ಜೂ.26): ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮ ಮುಂದುವರೆದಿದ್ದು, ಶಿವಸೇನೆಯ ವಿರುದ್ಧ ಬಂಡಾಯವೆದ್ದಿರುವ ಏಕನಾಥ ಶಿಂಧೆ ಸೇರಿದಂತೆ 40 ಶಾಸಕರು ಠಾಕ್ರೆ ಪಕ್ಷದ ನಿದ್ದೆಗೆಡಿಸಿದ್ದಾರೆ. ಹೀಗಿರುವಾಗಲೇ ಈಗ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವುತ್ '40 ಶಾಸಕರ ಮೃತದೇಹವಷ್ಟೇ ಗುವಾಹಟಿಯಿಂದ ರಾಜ್ಯಕ್ಕೆ ಬರಲಿದೆ. ಅವುಗಳನ್ನು ನೇರವಾಗಿ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗುತ್ತದೆ ಎಂದಿರುವ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಹೌದು ಕಳೆದೊಂದು ವಾರದಿಂದಮ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಇಡೀ ದೇಶದಲ್ಲೇ ಸದ್ದು ಮಾಡುತ್ತಿದೆ. ಹೀಗಿರುವಾಗ ಅಧಿಕಾರ ಕಳೆದುಕೊಳ್ಳುವ ಹಂತದಲ್ಲಿರುವ ಶಿವಸೇನೆ ಸರ್ಕಾರ ಉಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಅತ್ತ ಸಿಎಂ ಉದ್ಧವ್ ಠಾಕ್ರೆ ಕುರ್ಚಿ ಉಳಿಸಿಕೊಳ್ಳಲು, ಬಿಜೆಪಿಗೆ ಅಧಿಕಾರ ನೀಡದಿರಲು ಎಲ್ಲಾ ಯತ್ನಗಳನ್ನು ಮಾಡಿದ್ದಾರೆ. ಭಾವನಾತ್ಮಕವಾಗಿ ಮಾತನಾಡಿ ಬಂಡಾಯ ಶಾಸಕರ ಮನವೊಲಿಸಲು ಯತ್ನಿಸಿದ್ದು, ಅದರಲ್ಲಿ ವಿಫಲವಾದಾಗ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ಹೀಗಿದ್ದರೂ ಬಂಡಾಯ ಶಾಸಕರು ಮಾತ್ರ ಯಾವುದಕ್ಕೂ ಜಗ್ಗಿಲ್ಲ. ಹೀಗಿರುವಾಗ ಈ ವಿಚಾರವಾಗಿ ಹಿರಿಯ ನಾಯಕ ಸಂಜಯ್ ರಾವತ್ ಕೂಡಾ ಭಾರೀ ಸದ್ದು ಮಾಡುತ್ತಿದ್ದಾರೆ. ಒಂದಾದ ಬಳಿಕ ಮತ್ತೊಂದರಂತೆ ಅವರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳೇ ಶಿವಸೇನೆಗೆ ಮತ್ತಷ್ಟು ಕಂಟಕವಾಗುತ್ತಿವೆ.
40 ಶಾಸಕರ ಶವ ಬರಲಿದೆ
ಸದ್ಯ ರಾವತ್ ನೀಡಿರುವ ಭಾಷಣವೊಂದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದರಲ್ಲಿ ರಾವತ್ ಸರ್ಕಾರ ಹಾಗೂ ಶಿವಸೇನೆ ವಿರುದ್ಧ ಬಂಡಾಯವೆದ್ದು ಗುವಾಹಟಿಯ ಹೋಟೆಲ್ ಸೇರಿರುವ ಶಿಂಧೆ ಸೇರಿ ನಲ್ವತ್ತು ಶಾಸಕರಿಗೆ ಬಹಿರಂಗ ಬೆದರಿಕೆಯೊಡ್ಡಿದ್ದಾರೆ. ಹೌದು ಕಾರ್ಯಕರ್ತರನ್ನುದ್ದೇಶಿಸಿ ಉದ್ರಿಕ್ತ ಭಾಷಣ ಮಾಡಿರುವ ಸಂಜಯ್ ರಾವತ್ ನಾವು ಗುವಾಹಟಿಯಿಂದ 40 ಬಂಡಾಯ ಶಾಸಕರ ಶವಗಳನ್ನು ನೇರವಾಗಿ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸುತ್ತೇವೆ ಎಂದಿದ್ದಾರೆ. ಬಿಜೆಪಿ ನಾಯಕರು ಸೇರಿದಂತೆ ಅನೇಕ ಮಂದಿ ಈ ವಿಡಿಯೋ ತುಣುಕನ್ನು ಶೇರ್ ಮಾಡಿಕೊಳ್ಳುತ್ತಿದ್ದು, ರಾವತ್ ವರ್ತನೆ ಸರಿಯಲ್ಲ, ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸೇನಾ ನಾಯಕ ರಾವುತ್ ದೊಂಬಿ ಎಚ್ಚರಿಕೆ?
ಇನ್ನು ಶುಕ್ರವಾರವೂ ರಾವತ್ ನಿಡಿರುವ ಹೇಳಿಕೆ ಭಾರೀ ಸದ್ದು ಮಾಡಿತ್ತು, ಅಂದು ಮಾತನಾಡಿದ್ದ ಅವರು ‘ನಮಗೆ ಸವಾಲು ಹಾಕುತ್ತಿರುವ ಶಿಂಧೆ ಬಣ, ನಮ್ಮ ಕಾರ್ಯಕರ್ತರಿನ್ನೂ ಬೀದಿಗೆ ಇಳಿದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಂಥ ಹೋರಾಟಗಳನ್ನು ಒಂದೋ ಕಾನೂನಿನ ಮೂಲಕ ಇಲ್ಲವೇ ರಸ್ತೆಯಲ್ಲಿ ಹೋರಾಡಲಾಗುತ್ತದೆ. ಪರಿಸ್ಥಿತಿ ಬಯಸಿದರೆ ನಮ್ಮ ಕಾರ್ಯಕರ್ತರು ರಸ್ತೆಗೆ ಬರಲು ಸಿದ್ಧ’ ಎಂದು ಹೇಳಿದ್ದರು.
ರಾವುತ್ ಅವರ ಹೇಳಿಕೆಗೆ ಜಾಲತಾಣದಲ್ಲಿ ಸಾರ್ವಜನಿಕರು ಕಟುವಾಗಿ ಟೀಕಿಸಿದ್ದು ‘ರಸ್ತೆಯಲ್ಲಿ ಹೋರಾಡುವುದು ಎಂದರೇನು? ಗೂಂಡಾಗಿರಿ, ಧ್ವಂಸ, ಸಾರ್ವಜನಿಕ ಆಸ್ತಿಗಳ ಮೇಲೆ ದಾಳಿಗೆ ಕರೆ ನೀಡುವುದೇ? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ನೆಟ್ಟಿಗರು, ತಮ್ಮದೇ ಸರ್ಕಾರವಿರುವ ರಾಜ್ಯದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಹೋರಾಡುತ್ತಾರೆ ಎಂದು ಎಚ್ಚರಿಕೆ ನೀಡುವುದರ ಅರ್ಥವೇನು? ಎಂದು ಪ್ರಶ್ನಿಸಿದ್ದರು.
ಸಂಜಯ್ ಹೇಳಿಕೆಯ ಬೆನ್ನಲ್ಲೇ ಗುವಾಹಟಿಯಲ್ಲಿ ಶಿಂಧೆ ಕ್ಯಾಂಪ್ ಸೇರಿದ ಇಬ್ಬರು ಶಾಸಕರ ಕಚೇರಿಯ ಮೇಲೆ ಶಿವ ಸೈನಿಕರು ದಾಳಿ ನಡೆಸಿದ್ದರು. ಶಾಸಕ ಮಂಗೇಶ್ ಕುಡಾಲ್ಕರ್ ಅವರ ಕುರ್ಲಾದಲ್ಲಿರುವ ಕಚೇರಿ ಹಾಗೂ ಚಂಡೀವಲಿಯಲ್ಲಿರುವ ದಿಲೀಪ್ ಲಾಂಡೆ ಅವರ ಕಚೇರಿಯನ್ನು ಶಿವ ಸೈನಿಕರು ಧ್ವಂಸಗೊಳಿಸಿದ್ದು, ಅವರ ಪೋಸ್ಟರ್‌ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಭಾರೀ ಪ್ರಮಾಣದಲ್ಲಿ ಶಿವಸೈನಿಕರು ಬೀದಿಗಿಳಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರಿಗೆ ಅಲರ್ಚ್ ಘೋಷಿಸಲಾಗಿತ್ತು.
