Asianet Suvarna News Asianet Suvarna News

ಸೊಲ್ಲಾಪುರ ಬಿಜೆಪಿ ಸಂಸದಗೆ ಅನರ್ಹತೆ ಭೀತಿ!

ಸೊಲ್ಲಾಪುರ ಬಿಜೆಪಿ ಸಂಸದಗೆ ಅನರ್ಹತೆ ಭೀತಿ| ಜಯಸಿದ್ದೇಶ್ವರರ ಸ್ವಾಮೀಜಿ ಜಾತಿ ಪ್ರಮಾಣಪತ್ರ ಅಸಿಂಧು| ಸ್ವಾಮೀಜಿ ಎಸ್‌ಸಿ ಸಮುದಾಯದವರಲ್ಲ| ಜಾತಿ ಪರಿಶೀಲನಾ ಸಮಿತಿ ತೀರ್ಪು| ಇದರ ವಿರುದ್ಧ ಹೈಕೋರ್ಟ್‌ಗೆ: ಸ್ವಾಮೀಜಿ ಪರ ವಕೀಲರು

Maharashtra Politics Panel invalidates Solapur BJP MP caste certificate
Author
Bangalore, First Published Feb 26, 2020, 8:28 AM IST

ಸೊಲ್ಲಾಪುರ[ಫೆ.26]: ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರದ ಬಿಜೆಪಿ ಸಂಸದ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನೀಡಿದ್ದ ಜಾತಿ ಪ್ರಮಾಣಪತ್ರವನ್ನು ಜಾತಿ ಪರಿಶೀಲನಾ ಸಮಿತಿ ರದ್ದುಗೊಳಿಸಿದೆ. ಇದರಿಂದಾಗಿ ಜಯಸಿದ್ದೇಶ್ವರರು ಸಂಸತ್‌ ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಸೊಲ್ಲಾಪುರ ಲೋಕಸಭಾ ಕ್ಷೇತ್ರವು ಪರಿಶಿಷ್ಟಜಾತಿಗೆ (ಎಸ್‌ಸಿ) ಮೀಸಲಾಗಿದೆ. ತಾವು ಬೇಡ ಜಂಗಮ ಸಮುದಾಯದವರು. ಇದು ಪರಿಶಿಷ್ಟಜಾತಿಗೆ ಸೇರಿದ ಸಮುದಾಯ ಎಂದು ಹೇಳಿಕೊಂಡು ಸ್ವಾಮೀಜಿ ಅವರು ಜಾತಿ ಪ್ರಮಾಣಪತ್ರ ಸಲ್ಲಿಸಿ ಚುನಾವಣೆ ಎದುರಿಸಿದ್ದರು. ಅಚ್ಚರಿಯ ರೀತಿಯಲ್ಲಿ ಅವರು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಸುಶೀಲ್‌ಕುಮಾರ್‌ ಶಿಂಧೆ ಅವರನ್ನು 1.5 ಲಕ್ಷ ಮತದಿಂದ ಮಣಿಸಿದ್ದರು.

ಆದರೆ, ‘ಸ್ವಾಮೀಜಿ ಅವರು ಹಿಂದೂ ಲಿಂಗಾಯತ ಸಮುದಾಯದವರು. ಪರಿಶಿಷ್ಟಜಾತಿಗೆ ಸೇರಿದ ಬೇಡ ಜಂಗಮರಲ್ಲ. ಅವರ ಜಾತಿ ಪ್ರಮಾಣಪತ್ರದ ಬಗ್ಗೆ ತನಿಖೆ ನಡೆಸಬೇಕು’ ಎಂದು ಪ್ರಮೋದ್‌ ಗಾಯಕವಾಡ್‌ ಎಂಬುವರು ಜಾತಿ ಪರಿಶೀಲನಾ ಸಮಿತಿಗೆ ದೂರು ನೀಡಿದ್ದರು.

ಇದರ ವಿಚಾರಣೆ ನಡೆಸಿದ ತ್ರಿಸದಸ್ಯ ಜಾತಿ ಪರಿಶೀಲನಾ ಸಮಿತಿ, ‘ಸ್ವಾಮೀಜಿ ಬೇಡ ಜಂಗಮರಲ್ಲ’ ಎಂದು ತೀರ್ಮಾನಿಸಿ, ಅವರ ಜಾತಿ ಪ್ರಮಾಣಪತ್ರ ರದ್ದುಗೊಳಿಸಿತು ಹಾಗೂ ಆ ಪ್ರಮಾಣಪತ್ರವನ್ನು ಫೋರ್ಜರಿ ಮಾಡಲಾಗಿದೆ ಎಂದು ಹೇಳಿತು. ಅಲ್ಲದೆ, ಜಾತಿ ಪ್ರಮಾಣಪತ್ರ ಕಾಯ್ದೆ-2020ರ ಅನ್ವಯ ಅವರ ವಿರುದ್ಧ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಬೇಕು ಎಂದು ಅಕ್ಕಲಕೋಟ ತಹಶೀಲ್ದಾರರಿಗೆ ಸೂಚಿಸಿತು.

ಅನರ್ಹತೆ ಭೀತಿ:

ಸ್ವಾಮೀಜಿ ಅವರು ಈ ತೀರ್ಪಿನಿಂದಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗಲಿದ್ದಾರೆ ಎಂದು ದೂರುದಾರರ ಪರ ವಕೀಲರು ಹೇಳಿದ್ದಾರೆ.

ಆದರೆ, ಸ್ವಾಮೀಜಿ ಪರ ವಕೀಲ ಸಂತೋಷ್‌ ನಾವಕರ್‌ ಅವರು, ‘ಒತ್ತಡಕ್ಕೊಳಗಾಗಿ ಜಾತಿ ಸಮಿತಿ ಈ ತೀರ್ಪು ನೀಡಿದೆ. ಇದರ ವಿರುದ್ಧ ಬಾಂಬೆ ಹೈಕೋರ್ಟ್‌ ಮೊರೆ ಹೋಗಲಿದ್ದೇವೆ’ ಎಂದಿದ್ದಾರೆ.

Follow Us:
Download App:
  • android
  • ios