ಮಹಾರಾಷ್ಟ್ರದ ನಾಗ್ಪುರದಲ್ಲಿ ಬಿಜೆಪಿ ಸೋಲಿನ ಬೆನ್ನಲ್ಲೇ ಏಕನಾಥ್ ಶಿಂಧೆ ಅವರನ್ನು ಮತ್ತೆ ಸಿಎಂ ಮಾಡುವಂತೆ ಅವರ ಬಣ ಒತ್ತಾಯಿಸಿದೆ. ಮೈತ್ರಿಕೂಟದೊಳಗೇ ಇದ್ದು ವಿಪಕ್ಷಗಳಿಗೆ ಮತ ಹಾಕಿಸಿದ ಗಂಭೀರ ಆರೋಪಗಳು ಕೇಳಿಬಂದಿದ್ದು, ಮಹಾಯುತಿ ಮೈತ್ರಿಯಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಅಲ್ಲದೇ ಫಡ್ನವೀಸ್ ಹೇಳಿದ ಶಕುನಿ ಯಾರು? ಇಲ್ಲಿದೆ ಸಂಪೂರ್ಣ ವಿವರ.
ಬಿಜೆಪಿಯ ತವರು ನೆಲ, ನಾಗ್ಪುರ ಕ್ಷೇತ್ರವು ದೇವೇಂದ್ರ ಫಡ್ನವಿಸ್ ಅವರ ತವರು ಮತ್ತು ಆರ್ಎಸ್ಎಸ್ ನ ಮುಖ್ಯ ಕಚೇರಿ ಇರುವ ಅತ್ಯಂತ ಪ್ರತಿಷ್ಠಿತ ಕ್ಷೇತ್ರ. ಇಂಥ ಈ ಮಹತ್ವದ ಕ್ಷೇತ್ರದಲ್ಲಿ ಮಹಾಯುತಿ ಮೈತ್ರಿಕೂಟ ಸೋಲು ಕಂಡಿರುವುದು ಬಿಜೆಪಿ ನಾಯಕತ್ವಕ್ಕೆ ದೊಡ್ಡ ಆಘಾತ ತಂದಿದೆ. ಅಷ್ಟೇ ಅಲ್ಲ, ಶಿಂಧೆ ಟೀಂ ನಡೆ ಹಲವಾರು ಸಂಚಲನ ಸೃಷ್ಟಿಸಿದ್ದು, ಈಗ ಕೆಲ ಮಾಹಿತಿಯೊಂದಿಗೆ ಬೆಳಕಿಗೆ ಬಂದಿದೆ. ಅಲ್ಲದೇ ಫಡ್ನವೀಸ್ ಬೆಂಬಲಿಗರಿಂದ ಜತೆಗಿದ್ದು ಬೆನ್ನಲ್ಲೇ ಚೂರಿ ಹಾಕಿದರು ಎನ್ನುವ ಮಾತು ಇದೀಗ ಮುನ್ನೆಲೆಗೆ ಬಂದಿದೆ.
ಎಂಎಲ್ಸಿ ಸೋಲಿನ ಬೆನ್ನಲ್ಲೇ ಶಿಂಧೆ ಬಣದ ‘ಸ್ಕೆಚ್’!
ಫಲಿತಾಂಶ ಹೊರಬರುತ್ತಿದ್ದಂತೆ ಶಿವಸೇನೆಯ ರವೀಂದ್ರ ಧಾಂಗೇಕರ್, ಏಕನಾಥ್ ಶಿಂಧೆ ಅವರನ್ನು ಮತ್ತೆ ಸಿಎಂ ಮಾಡಬೇಕು ಎಂದು ಬಹಿರಂಗವಾಗಿ ಒತ್ತಾಯಿಸಿದರು. ಅಲ್ಲದೇ ಫಡ್ನವಿಸ್ ನಾಯಕತ್ವದಲ್ಲಿ ಸರ್ಕಾರದ ಇಮೇಜ್ ಹಾಳಾಗಿದೆ, ಮೈತ್ರಿ ಅಧಿಕಾರಕ್ಕೆ ಬಂದಿದ್ದೇ ಶಿಂಧೆ ಅವರಿಂದ ಎಂಬ ವಾದವನ್ನು ಮುಂದಿಟ್ಟು ಬಿಜೆಪಿ ತವರಲ್ಲೇ ಶಿಂಧೆ ಬಣ ಸ್ಕೆಚ್ ಹಾಕಿದೆ ಎಂಬ ಚರ್ಚೆ ಶುರುವಾಗಿದೆ. ಅಷ್ಟೇ ಅಲ್ಲ, ನಾಗ್ಪುರ ಮತ್ತು ಪುಣೆಯಲ್ಲಿ ಶಿವಸೇನೆ ಕಾರ್ಯಕರ್ತರು ಮೈತ್ರಿಧರ್ಮ ಪಾಲಿಸದೆ ವಿರೋಧ ಪಕ್ಷದ ಅಭ್ಯರ್ಥಿಗಳಿಗೆ ರಹಸ್ಯವಾಗಿ ವೋಟ್ ಹಾಕಿಸಿದ್ದಾರೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ಬಂಡಾಯದ ಸಾಕ್ಷಿ!
ಪುಣೆಯಲ್ಲಿ ಕೊನೆಯ ಕ್ಷಣದಲ್ಲಿ ಶಿವಸೇನೆ ನಾಯಕರು ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮೈತ್ರಿ ಮತಗಳನ್ನು ಒಡೆದಿದ್ದು, ಬಿಜೆಪಿಗೆ ‘ರೆಡ್ ಹ್ಯಾಂಡ್’ ಆಗಿ ಸಾಕ್ಷಿ ಸಿಕ್ಕಂತಾಗಿದೆ. ಶಿವಸೇನೆಯ ನಡೆಗೆ ಕೆರಳಿದ ಬಿಜೆಪಿ ಸಚಿವ ನಿತೇಶ್ ರಾಣೆ, ಮೈತ್ರಿಕೂಟದ ಒಳಗಿದ್ದುಕೊಂಡೇ ಉದ್ಧವ್ ಠಾಕ್ರೆ ಸ್ಕ್ರಿಪ್ಟ್ ಪ್ರಕಾರ ಆಡುತ್ತಿರುವ ಶಕುನಿ ಮಾಮಗಳನ್ನು ಪತ್ತೆಹಚ್ಚಲು ಆಂತರಿಕ ತನಿಖೆ ನಡೆಸಬೇಕು ಎಂದು ಬಾಂಬ್ ಸಿಡಿಸಿದ್ದಾರೆ. ಶಿಂಧೆ ಪರ ಜಪ ಮಾಡುತ್ತಿರುವ ನಾಯಕರಿಗೆ ತಮ್ಮ ಮಿತಿಯಲ್ಲಿ ಇರುವಂತೆ ಬಿಜೆಪಿ ಎಂಎಲ್ಸಿ ಪ್ರವೀಣ್ ದಾರೇಕರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಮುಳುಗುವ ದೋಣಿಯಲ್ಲಿ ಮಹಾ ಮೈತ್ರಿ!
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹೊತ್ತಿಗೆ ಮೈತ್ರಿಕೂಟದ ಒಳಗಿನ ಈ ಜಗಳ ಬೀದಿಗೆ ಬಂದಿದೆ. ಸೀಟು ಹಂಚಿಕೆ ವಿವಾದ, ಪರಸ್ಪರ ನಾಯಕರ ಕಾಲೆಳೆಯುವ ತಂತ್ರ ಮತ್ತು ಬಹಿರಂಗ ವಾಕ್ಸಮರವು ಮಹಾಯುತಿ ಮೈತ್ರಿಕೂಟದ ದೋಣಿ ಮುಳುಗುವ ಹಂತ ತಲುಪಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ವಿಪಕ್ಷಗಳ ತಂತ್ರವೇನು?
ವಿಧಾನ ಪರಿಷತ್ನ ಐದು ಸ್ಥಾನಗಳ ಪೈಕಿ ಮೂರರಲ್ಲಿ ಜಯಭೇರಿ ಬಾರಿಸಿರುವ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ನೇತೃತ್ವದ ಎಂವಿಎ ಮೈತ್ರಿಕೂಟ, ಆಡಳಿತ ಪಕ್ಷದೊಳಗಿನ ಈ ಜಗಳವನ್ನು ನೋಡಿ ಬೀಗುತ್ತಿದೆ. ಮಹಾಯುತಿಯೊಳಗಿನ ಬಿರುಕನ್ನು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮಗೆ ಪ್ಲಸ್ ಮಾಡಿಕೊಳ್ಳಲು ವಿಪಕ್ಷಗಳು ತಂತ್ರ ರೂಪಿಸುತ್ತಿವೆ.
ಅಧಿಕಾರಕ್ಕಾಗಿ ಮೈತ್ರಿಧರ್ಮ ಗಾಳಿಗೆ ತೂರಿದ ಸಚಿವರು!
ಸಂಭಾಜಿನಗರದಲ್ಲಿ ಶಿವಸೇನೆ ಸಚಿವ ಅಬ್ದುಲ್ ಸತ್ತಾರ್ ಅವರೇ ಖುದ್ದಾಗಿ ಮೈತ್ರಿಕೂಟದ ಅಧಿಕೃತ ಎನ್ಸಿಪಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿರುವುದು ಜಗಜ್ಜಾಹೀರಾಗಿದೆ. ಇದು ಕೇವಲ ಶಾಸಕರ ಮಟ್ಟದ ಜಗಳವಲ್ಲ, ಸಚಿವರೇ ಮೈತ್ರಿಧರ್ಮ ಮುರಿದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಸ್ಥಳೀಯ ಕಾರ್ಯಕರ್ತರ ಮಟ್ಟದ ತೀವ್ರ ಅಸಮಾಧಾನ: ಡಿಸೆಂಬರ್ 2 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸೀಟು ಹಂಚಿಕೆ ಇನ್ನೂ ಅಂತಿಮವಾಗದ ಕಾರಣ, ತಳಮಟ್ಟದಲ್ಲಿ ಬಿಜೆಪಿ ಮತ್ತು ಶಿವಸೇನೆ ಕಾರ್ಯಕರ್ತರ ನಡುವೆ ತೀವ್ರ ಪೈಪೋಟಿ ಶುರುವಾಗಿದೆ. ಪರಸ್ಪರ ಕಾರ್ಯಕರ್ತರನ್ನು ಸೆಳೆಯುವ ಕೆಲಸ ನಡೆಯುತ್ತಿರುವುದು ಮೈತ್ರಿಕೂಟದ ದೋಣಿಯನ್ನು ಮತ್ತಷ್ಟು ಮುಳುಗಿಸುತ್ತಿದೆ.






