ಮುಂಬೈ(ಫೆ.02): ನಿರ್ಲಕ್ಷ್ಯಕ್ಕೆ ತಜಕ್ಕ ಉದಾಹರಣೆಯಂತಿದೆ ಮಹಾರಾಷ್ಟ್ರದಲ್ಲಿ ನಡೆದ ಈ ಘಟನೆ. ಹೌದು ವಿಶ್ವ ಪೋಲೀಯೋ ದಿನದಂದು ಇಲ್ಲಿನ ಹನ್ನೆರಡು ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಬದಲಾಗಿ ಸ್ಯಾನಿಟೈಸರ್‌ ನೀಡಲಾಗಿದೆ. 

ಎಲ್ಲಾ ಮಕ್ಕಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇನ್ನು ಪೊಲೀಯೋ ಬದಲಾಗಿ ಸ್ಯಾನಿಟೈಸರ್‌ ನೀಡಿ ನಿರ್ಲಕ್ಷ್ಯ ತೋರಿದ ಮೂವರು ವೈದ್ಯಕೀಯ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ. 

ವಿಶ್ವ ಪಲ್ಸ್ ಪೋಲಿಯೋ ಅಭಿಯಾನ, ಜನವರಿ 31ರಂದು ಭನ್ಬೋರಾ ಪಿಎಚ್‌ಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಇನ್ನು ಸ್ಯಾನಿಟೈಸರ್‌ ಪಡೆದಿದ್ದ ಒಂದು ಮಗು ತನಗೆ ವಾಂತಿಯಾಗುತ್ತಿದೆ ಎಂದು ದೂರು ನೀಡಿದ್ದಾಳೆ. ಹೀಗಿರುವಾಗ ಆಕೆಯನ್ನು ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಇದಾದ ಬಳಿಕ ಒಟ್ಟಟು ಹನ್ನೆರಡು ಮಕ್ಕಳ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ಸದ್ಯ ಮಕ್ಕಳು ಚೇತರಿಸಿಕೊಂಡಿದ್ದರೂ ವೈದ್ಯರು ಅವರ ಮೇಲೆ ನಿಗಾ ಇರಿಸಿದ್ದಾರೆ. 

ಈಗಾಗಲೇ ಜಿಲ್ಲಾಧಿಕಾರಿ ಈ ಪ್ರಾಥಮಿಕ ಕೇಂದ್ರದಲ್ಲಿ ಪೋಲಿಯೋ ನೀಡುತ್ತಿದ್ದ ವೈದ್ಯ, ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆಯನ್ನು ಅಮಾನತ್ತುಗೊಳಿಸಲು ನಿರ್ಧರಿಸಿದ್ದು, ಅಧಿಕೃತ ಆದೇಶ ಹೊರ ಬರಬೇಕಿದೆ.