ಮಹಾರಾಷ್ಟ್ರದಲ್ಲಿ ಬ್ಯಾಲೆಟ್ ಪೇಪರ್ ಮರು ಜಾರಿಗೆ ಕಾಯ್ದೆ!| ವಿಧಾನಸಭೆ, ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಬಳಕೆ ಗುರಿ| ವಿಷಯ ಪರಿಶೀಲಿಸಿ ಕರಡು ಸಿದ್ಧಪಡಿಸಲು ಸ್ಪೀಕರ್ ಸೂಚನೆ| ಇವಿಎಂ, ಬ್ಯಾಲೆಟ್ ಪೇಪರ್ ಎರಡೂ ಬಳಸಲು ಸಿದ್ಧತೆ
ಮುಂಬೈ(ಫೆ.04): ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ಗಳನ್ನು ತಿರುಚಬಹುದು ಎಂದು ಕೆಲ ರಾಜಕೀಯ ಪಕ್ಷಗಳು ಆರೋಪಿಸುತ್ತಾ ಬಂದಿರುವುದರ ನಡುವೆಯೇ ಮಹಾರಾಷ್ಟ್ರದ ಮೈತ್ರಿ ಸರ್ಕಾರ ಮತ್ತೆ ಬ್ಯಾಲೆಟ್ ಪೇಪರ್‌ಗಳನ್ನು ಬಳಸಿ ಚುನಾವಣೆ ನಡೆಸುವ ಬಗ್ಗೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.
ಇಂಥದ್ದೊಂದು ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲಿಸಿ, ಕರಡು ಪ್ರಸ್ತಾವ ಸಿದ್ಧಪಡಿಸುವಂತೆ ರಾಜ್ಯ ವಿಧಾನಸಭೆಯ ಸ್ಪೀಕರ್ ನಾನಾ ಪಟೋಲೆ ಅವರು ಕಾನೂನು ಮತ್ತು ನ್ಯಾಯಾಂಗ ಇಲಾಖೆಗೆ ಸೂಚಿಸಿದ್ದಾರೆ. ಒಂದು ವೇಳೆ ಶೀಘ್ರವೇ ಕರಡು ಸಿದ್ಧವಾದಲ್ಲಿ, ಸದ್ಯದಲ್ಲೇ ಆರಂಭವಾಗುವ ಬಜೆಟ್ ಅಧಿವೇಶನದಲ್ಲೇ ಸಂಬಂಧಪಟ್ಟಕಾಯ್ದೆಗೆ ತಿದ್ದುಪಡಿ ತರಲೂ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಈ ಪ್ರಸ್ತಾವದ ಬಗ್ಗೆ ಮಹಾ ವಿಕಾಸ ಅಘಾಡಿ ಸರ್ಕಾರದ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಮೂರೂ ಪಕ್ಷಗಳು ಈ ಬಗ್ಗೆ ಒಮ್ಮತ ಹೊಂದಿವೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ಬ್ಯಾಲೆಟ್ ಪೇಪರ್ ಮರು ಜಾರಿಯಾದರೆ ಈ ನಿರ್ಧಾರ ಕೈಗೊಂಡ ಮೊದಲ ರಾಜ್ಯ ಇದಾಗಲಿದೆ. ಆದರೆ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಪ್ರಸ್ತಾಪದ ಬದಲು, ಬ್ಯಾಲೆಟ್ ಪೇಪರ್ ಮತ್ತು ಮತಯಂತ್ರ ಎರಡನ್ನೂ ಜೊತೆಜೊತೆಗೇ ಬಳಸಿ ಚುನಾವಣೆ ನಡೆಸುವ ಪ್ರಸ್ತಾಪ ಸರ್ಕಾರದ ಮುಂದಿದೆ.
ವಿಧಾನಸಭೆಗೆ ಹೊಸ ನೀತಿ ಜಾರಿ ಅಸಾಧ್ಯ
ವಿಧಾನಸಭಾ ಚುನಾವಣೆಗಳು ಕೇಂದ್ರ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ. ಅದರ ಸಮ್ಮತಿ ಇಲ್ಲದೆಯೇ ರಾಜ್ಯದಲ್ಲಿ ಬ್ಯಾಲೆಟ್‌ಪೇಪರ್ ಮತ್ತು ಇವಿಎಂ ಎರಡೂ ಬಳಸುವುದು ಸಾಧ್ಯವಿಲ್ಲ. ಹೀಗಾಗಿ ಒಂದು ವೇಳೆ ಮಹಾರಾಷ್ಟ್ರದಲ್ಲಿ ಕಾಯ್ದೆಗೆ ತಿದ್ದುಪಡಿ ತಂದರೂ ಅದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾತ್ರ ಸೀಮಿತವಾಗಿರಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 4, 2021, 8:54 AM IST