ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಭಿನ್ನಮತ| ರಾಜ್ಯಪಾಲರಿಗೆ ಸರ್ಕಾರಿ ವಿಮಾನ ಕೊಡದ ರಾಜ್ಯ ಸರ್ಕಾರ| ವಿಮಾನದಲ್ಲಿ 20 ನಿಮಿಷ ಕುಳಿತ ಗವರ್ನರ್
ಮುಂಬೈ(ಫೆ.11): ಸಾಮಾನ್ಯವಾಗಿ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಅಸಮಾಧಾನದ ಅಲೆಯ ವಿಚಾರ ಸದ್ದು ಮಾಡುತ್ತಲೇ ಇರುತ್ತದೆ. ಆದರೀಗ ಮಹಾರಾಷ್ಟ್ರ ರಾಜಭವನದಿಂದ ಶಾಕಿಂಗ್ ವಿಚಾರವೊಂದು ಬಯಲಾಗಿದೆ. ಇಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಯವರಿಗೆ ರಾಜ್ಯ ಸರ್ಕಾರ ಉತ್ತರಾಖಂಡ್‌ಗೆ ತೆರಳಲು ಸರ್ಕಾರಿ ವಿಮಾನ ನೀಡಲು ನಿರಾಕರಿಸಿದೆ. ಇನ್ನು ರಾಜ್ಯಪಾಲ ಕೋಶ್ಯಾರಿ ಚಾರ್ಟರ್ ಪ್ಲೇನ್‌ನಲ್ಲಿ ಸುಮಾರು ಇಪ್ಪತ್ತು ನಿಮಿಷ ಕುಳಿತು ವಿಮಾನ ಹಾರಾಟಕ್ಕೆ ಕಾಯುತ್ತಿದ್ದರೆನ್ನಲಾಗಿದೆ. ಹೀಗಿದ್ದರೂ ಉದ್ಧವ್ ಸರ್ಕಾರ ಅನುಮತಿ ನೀಡಿಲ್ಲ. ಹೀಗಿರುವಾಗ ಅಂತಿಮವಾಗಿ ರಾಜ್ಯಪಾಲ ಕೋಶ್ಯಾರಿ ಖಾಸಗಿ ಏರ್‌ಲೈನ್ಸ್‌ನಲ್ಲಿ ಟಿಕೆಟ್ ಬುಕ್ ಮಾಡಿ ಪ್ರಯಾಣ ಬೆಳೆಸಿದ್ದಾರೆ.
ವಿಮಾನ ಹಾರಾಟ ಮಾಡಲು ಪೈಲಟ್‌ಗೆ ನೀಡಿರಲಿಲ್ಲ ಅನುಮತಿ
ಗುರುವಾಗ ಬೆಳಗ್ಗೆ ಗವರ್ನರ್ ಕೋಶ್ಯಾರಿಯವರು ಮಸೂರಿಯ ಐಎಎಸ್ ಅಕಾಡೆಮಿಯಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯ ಸರ್ಕಾರದ ವಿಮಾನದಲ್ಲಿ ತೆರಳಬೇಕಿತ್ತು. ಹೀಗಿರುವಾಗ ಅವರು ಬಹಳಷ್ಟು ಹೊತ್ತು ವಿಮಾನದಲ್ಲಿ ಕುಳಿತು, ವಿಮಾನ ಹಾರಲು ಕಾಯುತ್ತಿದ್ದರು. ಆದರೆ ಪೈಲಟ್‌ಗೆ ಮಾತ್ರ ಸರ್ಕಾರ ಇದಕ್ಕೆ ಅನುಮತಿ ನೀಡಲಿಲ್ಲ. ಗವರ್ನರ್ ಕಾರಣ ಕೇಳಿದಾಗ ಅದಕ್ಕೂ ಉತ್ತರ ಸಿಗಲಿಲ್ಲ. ಹೀಗಾಗಿ ಅವರು ಖಾಸಗಿ ವಿಮಾನದಲ್ಲಿ ತೆರಳಿದ್ದಾರೆ.
ನಾವೂ ಹೀಗೆ ನಡೆಸಿಕೊಳ್ಳುತ್ತೇವೆ
ಮಹಾರಾಷ್ಟ್ರ ಬಿಜೆಪಿಯು, ಸರ್ಕಾರದ ಈ ವರ್ತನೆಯನ್ನು ಕಟುವಾಗಿ ಖಂಡಿಸಿದೆ. ಬಿಜೆಪಿ ನಾಯಕರೊಬ್ಬರು ಮಾತನಾಡುತ್ತಾ ಈಗ ಇವರು ರಾಜ್ಯಪಾಲರನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ, ಮುಂದಿನ ಚುನಾವಣೆಯಲ್ಲಿ ಜನರು ಇವರನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದಿದ್ದಾರೆ. ಇನ್ನು ಮಾಧ್ಯಮಗಳು ಈ ಬಗ್ಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್‌ರನ್ನು ಪ್ರಶ್ನಿಸಿದಾಗ ಅವರಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ.
ಸಿಎಂನಿಂದ ಮುಖ್ಯ ಕಾರ್ಯದರ್ಶಿ ಎಲ್ಲರಿಗೂ ಮಾಹಿತಿ
ಈ ಬಗ್ಗೆ ಮಾಹಿತಿ ನೀಡಿರುವ ರಾಜಭವನದ ಅಧಿಕಾರಿಗಳು ರಾಜ್ಯಪಾಲರು ಕಾರ್ಯಕ್ರಮದ ನಿಮಿತ್ತ ಡೆಹ್ರಾಡೂನ್‌ಗೆ ತೆರಳುತ್ತಾರೆಂದು ಫೆಬ್ರವರಿ 2ರಂದೇ ರಾಜ್ಯ ಸರ್ಕಾರಕ್ಕೆ ಮಾಹಿತಿ ರವಾನಿಸಲಾಗಿತ್ತು. ಅಲ್ಲದೇ ಈ ಬಗ್ಗೆ ಯಾರಿಗೆಲ್ಲಾ ಮಾಹಿತಿ ನೀಡಬೇಕಿತ್ತೋ ಅವರೆಲ್ಲರಿಗೂ ನೀಡಲಾಗಿದೆ. ಹೀಗಿದ್ದರೂ ಸರ್ಕಾರದ ಈ ವರ್ತನೆ ಸರಿಯಲ್ಲ ಎಂದಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 11, 2021, 4:04 PM IST