ಮುಂಬೈ (ಅ.22): ಪಕ್ಷದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಭ್ರಮನಿರಸನಗೊಂಡಿದ್ದ ಮಹಾರಾಷ್ಟ್ರದ ಬಿಜೆಪಿ ಮುಖಂಡ ಏಕನಾಥ ಖಡ್ಸೆ ಅವರು ಕೊನೆಗೂ ಕೇಸರಿ ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ. ಶುಕ್ರವಾರ ಅವರು ಬಿಜೆಪಿಯ ‘ವೈರಿ ಪಕ್ಷ’ ಎನ್‌ಸಿಪಿ ಸೇರಲಿದ್ದಾರೆ.

ಬುಧವಾರ ಈ ಬಗ್ಗೆ ಘೋಷಣೆ ಮಾಡಿದ ಅವರು, ‘ನನ್ನನ್ನು ಹೊರಹಾಕಲಾಗಿದೆ. ದೇವೇಂದ್ರ ಫಡ್ನವೀಸ್‌ ಹೊರತುಪಡಿಸಿ ನನಗೆ ಬೇರಾರ ಮೇಲೂ ಅತೃಪ್ತಿ ಇಲ್ಲ. ನಾನು ಎನ್‌ಸಿಪಿ ಸೇರುತ್ತಿದ್ದೇನೆ. ಒಬ್ಬನೇ ಆ ಪಕ್ಷ ಸೇರುತ್ತಿದ್ದು, ನನ್ನ ಜತೆ ಯಾವ ಬಿಜೆಪಿ ಶಾಸಕ/ಸಂಸದರೂ ಸೇರಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು. ಹಿಂದುಳಿದ ವರ್ಗದ (ಒಬಿಸಿ) ಖಡ್ಸೆ ಬಿಜೆಪಿ ಬಿಟ್ಟಿರುವುದು, ಪಕ್ಷದ ಒಬಿಸಿ ಮತಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

RR ನಗರ ಉಪಚುನಾವಣೆ: ಮುನಿರಾಜುಗೆ ಮುನಿರತ್ನ ಗೆಲ್ಲಿಸುವ ಉಸ್ತುವಾರಿ ...

2016ರಲ್ಲಿ ಖಡ್ಸೆ ಅವರು ಭ್ರಷ್ಟಾಚಾರ ಆರೋಪ ಕೇಳಿಬಂದ ಕಾರಣ ದೇವೇಂದ್ರ ಫಡ್ನವೀಸ್‌ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಆಗಿನಿಂದಲೇ ಅವರು ಫಡ್ನವೀಸ್‌ ಬಗ್ಗೆ ತೀವ್ರ ಅತೃಪ್ತಿ ಹೊಂದಿದ್ದರು. ಅಲ್ಲದೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರಿ ಸೋಲನ್ನು ಅನುಭವಿಸಿದ ಹಿಂದೆ ಫಡ್ನವೀಸ್‌ ಕೈವಾಡದ ಶಂಕೆ ವ್ಯಕ್ತಪಡಿಸಿದ್ದರು.

ಈ ನಡುವೆ, ಖಡ್ಸೆ ಎನ್‌ಸಿಪಿ ಸೇರ್ಪಡೆ ಖಚಿತಪಡಿಸಿದ ಮಹಾರಾಷ್ಟ್ರದ ಸಚಿವ ಹಾಗೂ ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ ಪಾಟೀಲ್‌, ‘ಖಡ್ಸೆ ಅವರು ಶುಕ್ರವಾರ 2 ಗಂಟೆಗೆ ನಮ್ಮ ಪಕ್ಷ ಸೇರಲಿದ್ದಾರೆ. ಇದು ಎನ್‌ಸಿಪಿಗೆ ಬಲ ನೀಡಲಿದೆ. ಇನ್ನೂ ಅನೇಕ ಬಿಜೆಪಿಗರು ನಮ್ಮ ಪಕ್ಷಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ’ ಎಂದರು.