ಅಕ್ಟೋಬರ್ 11 ರಂದು Ujjain ಮಹಾಕಾಲ ಲೋಕ ಉದ್ಘಾಟನೆ: ಪ್ರಧಾನಿ Modiಯಿಂದ ಲೋಕಾರ್ಪಣೆ
ಮಹಾಕಾಲನ ಭಕ್ತರಿಗೆ ಇನ್ನು ದೇವರ ದರ್ಶನ ಸುಲಭವಾಗಲಿದ್ದು, ಅತ್ಯಾಧುನಿಕ ಸೌಲಭ್ಯ ಹೊಂದಿದ ನೂತನ ಕಾರಿಡಾರ್ ನಿರ್ಮಾಣಗೊಂಡಿದ್ದು, ಅಕ್ಟೋಬರ್ 11 ಕ್ಕೆ ಲೋಕಾರ್ಪಣೆಯಾಗಲಿದೆ. ದೇಗುಲದ ಸುತ್ತಲಿನ ಇಕ್ಕಟ್ಟಾದ ಜಾಗಕ್ಕೆ ಈಗ ವಿಶಾಲ ರೂಪ ನೀಡಲಾಗಿದೆ.
ಉಜ್ಜಯಿನಿ: ಕಾಶಿ ಕಾರಿಡಾರ್ ಮಾದರಿಯಲ್ಲೇ ಮಧ್ಯಪ್ರದೇಶದ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯವನ್ನು ಒದಗಿಸುವ ಹಾಗೂ ದೇವರ ದರ್ಶನವನ್ನು ಆರಾಮದಾಯಕವಾಗಿಸುವ ಮೆಗಾ ಕಾರಿಡಾರ್ (Mahakal Corridor) ‘ಮಹಾಕಾಲ ಲೋಕ’ವನ್ನು ( Shree Mahakal Lok) ಅಕ್ಟೋಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಮಹಾಕಾಲೇಶ್ವರ ದೇವಾಲಯ ಕಾರಿಡಾರ್ ಅಭಿವೃದ್ಧಿಯ ಮೊದಲನೇ ಹಂತ 856 ಕೋಟಿ ರೂ. ವೆಚ್ಚದಲ್ಲಿ ಪೂರ್ಣವಾಗಿದ್ದು, ಪ್ರಧಾನಿ ಮೋದಿ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಧಾನಿ ಇದಕ್ಕೂ ಮುನ್ನ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಕಾರಿಡಾರ್‌ನ ಪ್ರಧಾನ ದ್ವಾರವಾಗಿರುವ ‘ನಂದಿ ದ್ವಾರ’ಕ್ಕೆ ತೆರಳಿ, ಮಹಾಕಾಲ ಲೋಕದ ಉದ್ಘಾಟನೆ ನೆರವೇರಿಸಲಿದ್ದಾರೆ.
ಅವರು ಈ ಕಾರಿಡಾರ್ ಮಾರ್ಗವಾಗಿ ಸಾಗುವಾಗ ಮಾರ್ಗದುದ್ದಕ್ಕೂ ಹಲವಾರು ಕಲಾವಿದರು ತಮ್ಮ ಕಲೆ ಪ್ರದರ್ಶಿಸಲಿದ್ದು, ಕಾರಿಡಾರ್ ಉದ್ಘಾಟನೆ ನಂತರ ಕಾರ್ತಿಕ್ ಮೇಳ ಎಂಬ ಅದ್ದೂರಿ ಸಮಾರಂಭ ಆಯೋಜಿಸಲಾಗಿದ್ದು, ಖ್ಯಾತ ಗಾಯಕ ಕೈಲಾಶ್ ಖೇರ್ ‘ಜೈ ಶ್ರೀ ಮಹಾಕಾಲ’ ಎಂಬ ಸ್ತುತಿ ಹಾಡಲಿದ್ದಾರೆ ಎಂದು ಈ ಕಾರಿಡಾರ್ ಯೋಜನೆ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ನಾಳೆಯಿಂದ ಮತ್ತೆ 3 ದಿನಗಳ ಕಾಲ Narendra Modi ಗುಜರಾತ್ ಪ್ರವಾಸ: ಚುನಾವಣೆ ಹಿನ್ನೆಲೆ BJPಯಿಂದ 5 ಯಾತ್ರೆ
ಕಾರಿಡಾರ್ ಹೇಗಿದೆ?
ಈವರೆಗೆ ಮಹಾಕಾಲ ದೇಗುಲದ ಸುತ್ತ ಇಕ್ಕಟ್ಟಾದ ಜಾಗವಿತ್ತು. ಇದನ್ನು ತೆರವುಗೊಳಿಸಿ ವಿಶಾಲವಾದ ಕಾರಿಡಾರ್ ನಿರ್ಮಿಸಲಾಗಿದೆ. ಇದರಿಂದ ಭಕ್ತರಿಗೆ ಆರಾಮವಾಗಿ ದೇಗುಲಕ್ಕೆ ಸಾಗಿಬರಲು ಅನುಕೂಲವಾಗಲಿದೆ. ಇದು ಸುಮಾರು 900 ಮೀ. ಉದ್ದದ ಕಾರಿಡಾರ್ ಆಗಿದ್ದು, ದೇಶದ ಅತಿದೊಡ್ಡ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಇದು 2 ಪ್ರಮುಖ ಗೇಟ್‌ವೇ- ನಂದಿ ದ್ವಾರ (Nandi Dwaar) ಹಾಗೂ ಪಿನಾಕಿ ದ್ವಾರವನ್ನು (Pinaki Dwaar) ಒಳಗೊಂಡಿದೆ.
ಮೇಲ್ಭಾಗದಲ್ಲಿ ತ್ರಿಶೂಲ ಶೈಲಿಯ ವಿನ್ಯಾಸವಿರುವ ಹಾಗೂ ಶಿವನ ಮುದ್ರೆಗಳಿರುವ 108 ಅಲಂಕೃತ ಮರಳುಗಲ್ಲುಗಳ ಸ್ತಂಭಗಳಿಂದ ಕಾರಿಡಾರ್ ಅನ್ನು ಅಲಂಕರಿಸಲಾಗಿದೆ. ಇದು ದೇವತೆಗಳ ಕಲಾತ್ಮಕ ಶಿಲ್ಪ ಹಾಗೂ ಪ್ರಕಾಶಿತ ಭಿತ್ತಿಚಿತ್ರಗಳಿಂದ ಆವೃತವಾದ ಕಾರಂಜಿಯನ್ನು ಒಳಗೊಂಡಿದೆ. ಕಾಶಿ ಕಾರಿಡಾರ್ ಮಾದರಿಯಲ್ಲೇ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯವನ್ನು ಒದಗಿಸಲು ಇದನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: ಮಹಾಕಾಲ ಪ್ರಸಾದಕ್ಕೆ ಅವಮಾನ..! ಹೃತಿಕ್ ರೋಷನ್ Zomato ಜಾಹೀರಾತು ಹಿಂಪಡೆಯಲು ಆಗ್ರಹ