60 ರೂಪಾಯಿ ಎಗರಿಸಿದ ಆರೋಪಿಯನ್ನು 27 ವರ್ಷ ಬಳಿಕ ಬಂಧಿಸಿದ ಪೊಲೀಸ್!
28ರ ಹರೆಯದಲ್ಲಿ ಅಂದರೆ 1997ರಲ್ಲಿ 60 ರೂಪಾಯಿ ಎಗರಿಸಿದ್ದ. ಬಳಿಕ ನಾಪತ್ತೆಯಾಗಿದ್ದ. ಇದೀಗ ಬರೋಬ್ಬರಿ 27 ವರ್ಷದ ಬಳಿಕ ಈ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧುರೈ(ನ.12) ಒಮ್ಮೆ ಪ್ರಕರಣ ದಾಖಲಾದರೆ ಪೊಲೀಸರು ಹದ್ದಿನ ಕಣ್ಣಿಟ್ಟಿರುತ್ತಾರೆ. ಹೀಗಾಗಿ ಹಲವು ಆರೋಪಿಗಳು ಸುದೀರ್ಘ ವರ್ಷಗಳ ಬಳಿಕ ಅರೆಸ್ಟ್ ಆದ ಘಟನೆಗಳು ನಡೆದಿದೆ. ಆದರೆ ಇದೀಗ ಪೊಲೀಸರು ಕಾರ್ಯಾಚರಣೆ ಪರ ವಿರೋಧಕ್ಕೆ ಕಾರಣವಾಗಿದೆ. ಈ ಘಟನೆ ನಡೆದಿದ್ದು 1997ರಲ್ಲಿ. ಅಂದು 60 ರೂಪಾಯಿ ಎಗರಿಸಿದ್ದ ಆರೋಪಿ ನಾಪತ್ತೆಯಾಗಿದ್ದ. ದೂರು ದಾಖಲಾಗಿತ್ತು. ಪೊಲೀಸರು ಹುಡುಕಾಟಿ ಆರೋಪಿ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು. ಆದರೆ ಬರೋಬ್ಬರಿ 27 ವರ್ಷದ ಬಳಿಕ 55 ವರ್ಷದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
55 ವರ್ಷದ ಶಿವಕಾಸಿಯ ಆರೋಪಿ ಪನ್ನಿರ್ ಸೆಲ್ವಂ ಅರೆಸ್ಟ್ ಆಗಿರುವ ಆರೋಪಿ. ಈತನ ಮೇಲಿರುವುದು 60 ರೂಪಾಯಿ ಎಗರಿಸಿದ ಪ್ರಕರಣ. 1997ರಲ್ಲಿ ಪನ್ನೀರ್ ಸೆಲ್ವಂಗೆ 28 ವಯಸ್ಸು. ಈ ವೇಳೆ ಪನ್ನೀರ್ ಸೆಲ್ವಂ ತೆಪ್ಪಾಕುಳಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 60 ರೂಪಾಯಿ ಎಗರಿಸಿದ್ದ. ಹಣ ಕಳೆದುಕೊಂಡ ವ್ಯಕ್ತಿ ದೂರು ನೀಡಿದ್ದ. 60 ರೂಪಾಯಿ ಆಗಿದ್ದ ಕಾರಣ ಅಂದು ಪೊಲೀಸರು ಹೆಚ್ಚಿನ ಆಸಕ್ತಿ ತೋರಲಿಲ್ಲ. ಆದರೂ ದೂರು ದಾಖಲಾಗಿದ್ದ ಕಾರಣ ಕಾನೂನು ಪ್ರಕ್ರಿಯೆ ಮುಗಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಾಹಿತಿ ಪಡೆದುಕೊಂಡು ಒಂದಷ್ಟು ದಿನ ತನಿಖೆ ನಡೆಸಿದ್ದರು. ಆದರೆ 60 ರೂಪಾಯಿ ಎಗರಿಸಿದ ಪನ್ನಿರ್ ಸೆಲ್ವಂ ನಾಪತ್ತೆಯಾಗಿದ್ದ.
ಪೊಲೀಸ್ ಠಾಣೆಯಲ್ಲೇ ಕಳ್ಳತನ, ವಶಪಡಿಸಿಟ್ಟಿದ್ದ 16 ಮದ್ಯದ ಬಾಟಲಿ ಕದ್ದೊಯ್ದ 6 ಮಹಿಳೆಯರು!
ಸಣ್ಣ ಮೊತ್ತವಾದ ಕಾರಣ ಪೊಲೀಸರು ಈ ಪ್ರಕರಣವನ್ನು ಮತ್ತೆ ತನಿಖೆ ಮಾಡುವ ಪ್ರಯತ್ನ ಮಾಡಲಿಲ್ಲ. 28ರ ಹರೆಯಲ್ಲಿ 60 ರೂಪಾಯಿ ಎಗರಿಸಿ ನಾಪತ್ತೆಯಾದ ಪನ್ನರ್ ಸೆಲ್ವಂ ಶಿವಕಾಸಿ ನಿವಾಸಿಯಾಗಿದ್ದ ಪನ್ನಿರ್ ಸೆಲ್ವಂ, ಕಳ್ಳತನ ಆರೋಪದ ಬಳಿಕ ಜಕ್ಕತೊಪ್ಪುವಿಗೆ ಬಂದು ನೆಲೆಸಿದ್ದ. ಈತನ ಮದುವೆಯೂ ಆಯಿತು. ಸಂಸಾರ ಸಾಗಿತ್ತು. ಮಕ್ಕಳು ದೊಡ್ಡವರಾಗಿದ್ದಾರೆ. ಇದೀಗ ಸೆಲ್ವಂ ವಯಸ್ಸ 55.
ಇತ್ತೀಚೆಗೆ ಮಧುರೈ ಪೊಲೀಸ್ ಠಾಣೆಗೆ ಆಗಮಿಸಿದ ಅಸಿಸ್ಟೆಂಟ್ ಕಮಿಷನರ್ ಸೂರಾ ಕುಮಾರ್ ಹಳೆ ಪೆಂಡಿಂಗ್ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಮುಂಜಾಗಿದ್ದಾರೆ. ಇದಕ್ಕಾಗಿ ತಂಡವೊಂದನ್ನು ರಚಿಸಿ ಹಳೇ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಈ ಪೈಕಿ 27 ವರ್ಷಗಳ ಹಿಂದಿನ 60 ರೂಪಾಯಿ ಪ್ರರಕರಣದ ಫೈಲ್ ಕೂಡ ಸಿಕ್ಕಿದೆ. ಆರೋಪಿ ಮಾಹಿತಿ ಪಡೆದ ಪೊಲೀಸರು ಹೊಸ ವಿಧಾನದ ಮೂಲಕ ತನಿಖೆ ನಡೆಸಿದ್ದಾರೆ. ಶಿವಕಾಶಿಯಿಂದ ಪನ್ನಿರ್ ಸೆಲ್ವಂ ಸ್ಥಳಾಂತರವಾಗಿ ಎರಡು ದಶಕಗಳೇ ಕಳೆದಿದೆ ಅನ್ನೋ ಮಾಹಿತಿ ಲಭ್ಯವಾಗಿತ್ತು. ತನಿಖೆ ಮುಂದುವರಿಸಿದ ಪೊಲೀಸರು ಆರೋಪಿ ಪನ್ನಿರ್ ಸೆಲ್ವಂ ಪತ್ತೆ ಹಚ್ಚಿದ್ದಾರೆ. ಬಳಿಕ ಅರೆಸ್ಟ್ ಮಾಡಿದ್ದಾರೆ.
ಈ ಬಂಧನ ಸುದ್ದಿ ಹೊರಬೀಳುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 27 ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರಿಗೆ ಮಚ್ಚುಗೆ ವ್ಯಕ್ತವಾಗಿದೆ. ಸುದೀರ್ಘ ವರ್ಷಗಳ ಬಳಿಕ ಪೊಲೀಸರು ಆರೋಪಿ ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಶ್ರಮಿಸಿದರೆ ಎಷ್ಟೇ ವರ್ಷವಾದರೂ ಪ್ರಕರಣ ಭೇದಿಸಲು ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ 60 ರೂಪಾಯಿ ಕೇಸ್ 27 ವರ್ಷದ ಬಳಿಕ ಪತ್ತೆ ಹಚ್ಚುವ ಬದಲು ಸದ್ಯ ನಡೆಯುತ್ತಿರುವ ಅಪರಾಧಗಳು, ಕಿರುಕುಳ ಪ್ರಕರಣ ತಡೆಯಲಿ. 60 ರೂಪಾಯಿ ಎಗರಿಸಿದ ವ್ಯಕ್ತಿಯ ಮೇಲೆ ಈ ಒಂದು ಪ್ರಕರಣ ಹೊರತುಪಡಿಸಿ ಇನ್ಯಾವುದೇ ಕೇಸ್ ಇಲ್ಲ. ಒಂದು ರೂಪಾಯಿ ಕದ್ದರೂ ಕಳ್ಳನೇ. ಆದರೆ ರಾಜ್ಯದಲ್ಲಿ ಸಾವಿರಾರು ಕೋಟಿ ನುಂಗಿದ ನಾಯಕರು, ಅಧಿಕಾರಿಗಳು ರಾಜಾರೋಶವಾಗಿ ಓಡಾಡುತ್ತಿರುವಾಗ 60 ರೂಪಾಯಿ ಎಗರಿಸಿದ ಆರೋಪಿಯನ್ನು ಹಿಡಿದು ಯಾವ ಪೌರುಷ ತೋರಿಸಿದ್ದೀರಿ? ಭುಜದ ಮೇಲಿನ ಸ್ಟಾರ್ ಹೆಚ್ಚಿಸಿಕೊಳ್ಳುವ ಯೋಜನೆ ಬಿಟ್ಟು ಪೊಲೀಸರಾಗಿ ಕಾರ್ಯಪ್ರವೃರ್ತಿಸಿ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
ಚೆನ್ನೈಗೆ ಸಾಗಿಸುತ್ತಿದ್ದ 12 ಕೋಟಿ ಮೌಲ್ಯದ ಐಫೋನ್ ಕಳ್ಳತನ,ಕೇಸ್ ದಾಖಲಿಸಲು 15 ದಿನ ತೆಗೆದ ಪೊಲೀಸ್!