ಮಧುರೈ(ಮಾ.26): ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿದೆ. ಈ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಲಸಿಕೆಗಳಲ್ಲೂ ಇರುವಂತೆ ಈ ಲಸಿಕೆ ಪಡೆದವರಿಗೂ ಮೈ ಕೈ ನೋವು, ಜ್ವರ ಕಂಡು ಬಂದಿದೆ. ಆದರೀಗ ಮಧುರೈನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಸಾವಿನ ಸುದ್ದಿ ಕೊರೋನಾ ಲಸಿಕೆಯಿಂದ ಸಂಭವಿಸಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಕೊರೋನಾ ಲಸಿಕೆಯಿಂದ ಆಕೆ ಮೃತಪಟ್ಟಳಾ ಇಲ್ಲಿದೆ ನೋಡಿ ವೈರಲ್ ಸುದ್ದಿ ಹಿಂದಿನ ಅಸಲಿಯತ್ತು.

ಕೋವಿಡ್‌ ವ್ಯಾಕ್ಸಿನ್‌ ಪಡೆಯಲು ವೃದ್ಧರ ಹಿಂದೇಟು

ಹೌದು ಕಳೆದೆರಡು ವಾರದ ಹಿಂದೆ ಮಧುರೈನ 26 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಹರಿ ಹರಿಣಿ ಎಂಬಾಕೆ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಅವರು ಕೊರೋನಾ ಲಸಿಕೆ ಪಡೆದ ಪರಿಣಾಮ ಮೃತಪಟ್ಟಿದ್ದಾರೆಂಬ ಸುದ್ದಿ ವೈರಲ್ ಆಗಿತ್ತು. ಆದರೀಗ ಈ ಸುದ್ದಿ ಸುಳ್ಳು, ಹರಿ ಹರಿಣಿ ಸಾವನ್ನಪ್ಪಿದ್ದ ಸುಮಾರು ಒಂದು ತಿಂಗಳ ಹಿಂದೆ ಕೋವಿಶೀಲ್ಡ್‌ ಲಸಿಕೆ ಪಡೆದಿದ್ದರು. ನೋವು ಕಡೆಮೆಯಾಗಲು ಪಡೆದ ಬೇರೊಂದು ಇಂಜೆಕ್ಷನ್‌ನಿಂದ ಅವರು ಮೃತಪಟ್ಟಿದ್ದಾರೆಂಬುವುದು ಬಯಲಾಗಿದೆ.

ಮಧುರೈ ಮೆಡಿಕಲ್‌ ಕಾಲೇಜಿನ ಅನಸ್ಥೇಶಿಯಾಲಜಿ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿದ್ದ ಹರಿ ಹರಿಣಿ, ಅದೇ ಕಾಲೇಜಿನಲ್ಲಿ ಜನರಲ್ ಸರ್ಜರಿ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದ ಡಾ. ಅಶೋಕ್‌ ವಿಘ್ನೇಶ್‌ರನ್ನು ಕಳೆದ ನವೆಂಬರ್‌ನಲ್ಲಿ ಮದುವೆಯಾಗಿದ್ದರು. ಹೀಗಿರುವಾಗ ಫೆಬ್ರವರಿ 5 ರಂದು ಹರಿಣಿ ಕೊರೋನಾ ಲಸಿಕೆ ಪಡೆದಿದ್ದರು. ಆದರೆ ಲಸಿಕೆ ಪಡೆದ ನಾಲ್ಕು ವಾರದ ಬಳಿಕ ಅಂದರೆ ಮಾರ್ಚ್ 5ರ ವೇಳೆಗೆ ಹರಿಣಿಯವರಿಗೆ ಜ್ವರ ಹಾಗೂ ಮೈಕೈ ನೋವು ಕಾಣಿಸಿಕೊಂಡಿದೆ. 

ಫಸ್ಟ್ ಡೋಸ್ ವ್ಯಾಕ್ಸಿನ್ ಪಡೆದ ರೇಸ್ 3 ನಿರ್ಮಾಪಕನಿಗೆ ಕೊರೋನಾ ಪಾಸಿಟಿವ್

ಹೆಂಡತಿಯ ಪರಿಸ್ಥಿತಿ ಕಂಡ ಗಂಡ ಅಶೋಕ್ ನೋವು ಕಡಿಮೆಯಾಗಲು Diclofenac ಎಂಬ ಚುಚ್ಚು ಮದ್ದು ನೀಡಿದ್ದಾರೆ. ಇದಾದ ಕೆಲವೇ ತಾಸಿನಲ್ಲಿ ಹರಿಣಿ ವಾಂತಿ ಮಾಡಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಯಿಸಲಾಯ್ತಾದರೂ ಯಾವುದೇ ಪ್ರಯೋಜನವಾಗಿಲ್ಲ. ಚಿಕಿತ್ಸೆಗೆ ಸ್ಪಂದಿಸದ ಹರಿಣಿ ಮೃತಪಟ್ಟಿದ್ದಾರೆ. 

ಸದ್ಯ ಹರಿಣಿ ಕೊರೋನಾ ಲಸಿಕೆಯಿಂದ ಮೃತಪಟ್ಟಿದ್ದಾರೆಂಬ ವಿಚಾರ ಸುಳ್ಳು. ಹರಿಣಿಯವರು ನೋವಿನ ಇಂಜೆಕ್ಷನ್‌ನಿಂದಾಗಿ ಮೃತಪಟ್ಟಿದ್ದಾರೆಂಬುದು ಮರಣೋತ್ತರ ಪರೀಕ್ಷೆಯಲ್ಲೂ ದೃಢವಾಗಿದೆ ಎಂಬುವುದು ವೈದ್ಯರ ಮಾತಾಗಿದೆ.