ಭೋಪಾಲ್‌(ಏ.11): ಆತಂಕಕಾರಿಯಾಗಿ ಏರಿಕೆಯಾಗುತ್ತಿರುವ ಕೋವಿಡ್‌ ನಿಗ್ರಹಕ್ಕೆ ಮಧ್ಯಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಶಾ ಠಾಕೂರ್‌ ದೇವರ ಮೊರೆ ಹೋಗಿದ್ದಾರೆ.

ಉಶಾ ಠಾಕೂರ್‌ ಸೋಂಕು ನಿಗ್ರಹಕ್ಕೆ ಇಲ್ಲಿನ ಇಂದೋರ್‌ ವಿಮಾನ ನಿಲ್ದಾಣದ ದೇವಿ ಅಹಲ್ಯಾ ಬಾಯಿ ಹೋಲ್ಕರ್‌ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ವಿಮಾನ ನಿಲ್ದಾಣ ನಿರ್ದೇಶಕ ಆರ್ಯಮಾ ಸನ್ಯಾಸ್‌ ಮತ್ತಿತರ ಸಿಬ್ಬಂದಿಗಳೂ ಭಾಗಿಯಾಗಿದ್ದಾರೆ.

ಠಾಕೂರ್‌ ಅವರು ಮಾಸ್ಕ್‌ ಸಹ ಧರಿಸದೆ ಸೋಂಕು ನಿಗ್ರಹಕ್ಕೆಂದು ಪೂಜೆ ಸಲ್ಲಿಸಿರುವುದು ಭಾರೀ ಟೀಕೆಗೆ ಗುರಿಯಾಗಿದೆ.

ಇದಕ್ಕೂ ಮೊದಲು ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಠಾಕೂರ್‌ ಅವರು,‘ನಾನು ಪ್ರತಿನಿತ್ಯ ಹವನ ನಡೆಸುತ್ತೇನೆ, ಹನುಮಾನ್‌ ಚಾಲೀಸ್‌ ಪಠಿಸುತ್ತೇನೆ. ಹಾಗಾಗಿ ನಾನು ಮಾಸ್ಕ್‌ ಧರಿಸುವ ಅಗತ್ಯ ಇಲ್ಲ’ ಎಂದಿದ್ದರು.