ದೈಹಿಕ ಸಂಬಂಧವಿಲ್ಲದೆ ಹೆಂಡತಿಯು ಮತ್ತೊಬ್ಬನ ಜತೆ ಹೊಂದಿರುವ ಪ್ರೇಮ ಬಾಂಧವ್ಯ ಅಥವಾ ಭಾವನಾತ್ಮಕ ಬಾಂಧವ್ಯವು ಕಾನೂನು ಪ್ರಕಾರ ವ್ಯಭಿಚಾರ ಆಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಪತ್ನಿ ಬೇರೊಬ್ಬರನ್ನು ಪ್ರೀತಿಸುತ್ತಿರುವುದರಿಂದ ಆಕೆ ಜೀವನಾಂಶಕ್ಕೆ ಅರ್ಹಳಲ್ಲ ಎಂಬ ಪತಿಯ ವಾದವನ್ನು ತಿರಸ್ಕರಿಸಿದೆ.
ಭೋಪಾಲ್ (ಫೆ.15): ದೈಹಿಕ ಸಂಬಂಧವಿಲ್ಲದೆ ಹೆಂಡತಿಯು ಮತ್ತೊಬ್ಬನ ಜತೆ ಹೊಂದಿರುವ ಪ್ರೇಮ ಬಾಂಧವ್ಯ ಅಥವಾ ಭಾವನಾತ್ಮಕ ಬಾಂಧವ್ಯವು ಕಾನೂನು ಪ್ರಕಾರ ವ್ಯಭಿಚಾರ ಆಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಛಿಂದ್ವಾಡದ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಗೆ 4000 ರೂಪಾಯಿ ಮಧ್ಯಂತರ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಪತಿ ಅರ್ಜಿ ಸಲ್ಲಿಸಿದ್ದ. ಆತನ ಅರ್ಜಿ ವಜಾ ಮಾಡಿದ ಹೈಕೋರ್ಟ್ ಈ ತೀರ್ಪು ನೀಡಿದೆ. ವಿಚಾರಣೆ ವೇಳೆ ಜೀವನಾಂಶ ಆದೇಶವನ್ನು ಪ್ರಶ್ನಸಿ ವಾದ ಮಂಡಿಸಿದ್ದ ಪತಿ, ತನ್ನ ಆದಾಯವೇ ಮಾಸಿಕ 8 ಸಾವಿರ ರೂಪಾಯಿ ಇದೆ. ಹೀಗಾಗಿ ಜೀವನಾಂಶ ಮೊತ್ತ ಅಧಿಕವಾಗಿದೆ. ಇನ್ನು ಪತ್ನಿಯು ಬೇರೆ ವ್ಯಕ್ತಿ ಜತೆ ಪ್ರೇಮ ಸಂಬಂಧ ಹೊಂದಿದ್ದಳು. ಹೀಗಾಗಿ ಆಕೆ ಜೀವನಾಂಶಕ್ಕೆ ಅರ್ಹಳಲ್ಲ ಎಂದು ವಾದಿಸಿದ್ದ. ಆದರೆ ಆತನ ವಾದ ತಿರಸ್ಕರಿಸಿದ ಕೋರ್ಟ್, ದೈಹಿಕ ಸಂಬಂಧವಿಲ್ಲದ ಪ್ರೇಮ ಸಂಬಂಧವನ್ನು ವ್ಯಭಿಚಾರ ಎನ್ನಲಾಗದು ಎಂದು ಹೇಳಿದೆ.
"ವ್ಯಭಿಚಾರವು ಎನ್ನಬೇಕಾದಲ್ಲಿ ಲೈಂಗಿಕ ಸಂಭೋಗವನ್ನು ಒಳಗೊಂಡಿರಬೇಕು" ಎಂದು ನ್ಯಾಯಮೂರ್ತಿ ಜಿ ಎಸ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟರು, ಆದರೆ ಪತ್ನಿ ಬೇರೊಬ್ಬರನ್ನು ಪ್ರೀತಿಸುತ್ತಿರುವುದರಿಂದ ಆಕೆ ಜೀವನಾಂಶಕ್ಕೆ ಅರ್ಹಳಲ್ಲ ಎಂಬ ಪತಿಯ ವಾದವನ್ನು ತಿರಸ್ಕರಿಸಿದರು. "ಯಾವುದೇ ದೈಹಿಕ ಸಂಬಂಧವಿಲ್ಲದೆ ಹೆಂಡತಿ ಬೇರೊಬ್ಬರ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿದ್ದರೂ ಸಹ, ಹೆಂಡತಿ ವ್ಯಭಿಚಾರದಲ್ಲಿ ಬದುಕುತ್ತಿದ್ದಾಳೆ ಎಂದು ಹೇಳಲು ಅದು ಸಾಕಾಗುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.
"ಗಂಡನ ಅಲ್ಪ ಆದಾಯವು ಜೀವನಾಂಶ ನಿರಾಕರಿಸುವ ಮಾನದಂಡವಾಗಿರಬಾರದು. ಅರ್ಜಿದಾರನು ತನ್ನ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಮರ್ಥನಲ್ಲ ಎಂದು ಸಂಪೂರ್ಣವಾಗಿ ತಿಳಿದೂ ಹುಡುಗಿಯನ್ನು ಮದುವೆಯಾದರೆ, ಅದಕ್ಕೆ ಅವನೇ ಜವಾಬ್ದಾರನಾಗಿರುತ್ತಾನೆ, ಆದರೆ ಅವನು ಸಮರ್ಥ ವ್ಯಕ್ತಿಯಾಗಿದ್ದರೆ ತನ್ನ ಹೆಂಡತಿಯನ್ನು ನಿರ್ವಹಿಸಲು ಅಥವಾ ನಿರ್ವಹಣಾ ಮೊತ್ತವನ್ನು ಪಾವತಿಸಲು ಅವನು ಏನನ್ನಾದರೂ ಸಂಪಾದಿಸಬೇಕು" ಎಂದು ನ್ಯಾಯಾಲಯ ಹೇಳಿದೆ.
