ಮಧ್ಯಪ್ರದೇಶದಲ್ಲಿ ಮೃತರ ಸಂಖ್ಯೆ ಮುಚ್ಚಿಡುತ್ತಿದೆಯಾ ಸರ್ಕಾರ| ಸ್ಮಶಾನ ತಲುಪುತ್ತಿರುವ ಹಾಗೂ ಸರ್ಕಾರ ತಿಳಿಸುತ್ತಿರುವ ಮೃತರ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸ| 

ಭೋಪಾಲ್(ಏ.14): 

ಮಧ್ಯಪ್ರದೇಶದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಆದರೆ ಈ ನಡುವೆ ಇಲ್ಲಿನ ಸರ್ಕಾರ ಕೊರೋನಾದಿಂದ ಮೃತಪಟ್ಟವರ ಮುಚ್ಚಿಡುತ್ತಿದೆಯಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಈ ಪ್ರಶ್ನೆ ಹುಟ್ಟಿಕೊಳ್ಳುವುದರ ಹಿಂದೆ ಕಾರಣವೂ ಇದೆ. ಯಾಕೆಂದರೆ ಸರ್ಕಾರ ತಿಳಿಸುತ್ತಿರುವ ಹಾಗೂ ಸ್ಮಶಾನ ತಲುಪುತ್ತಿರುವ ಮೃತದೇಹಗಳ ಬಹಳಷ್ಟು ವ್ಯತ್ಯಾಸ ಕಂಡು ಬಂದಿದೆ. 

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ವಿಶ್ರಾಮ್‌ ಘಾಟ್‌ನಲ್ಲೇ ಸೋಮವಾರ ಸಂಜೆ ಆರು ಗಂಟೆವರೆಗೆ ಮೂವತ್ತೇಳು ಶವಗಳ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ. ಜೊತೆಗೆ ಐದು ಶವಗಳನ್ನು ಸ್ಮಶಾನದಲ್ಲಿ ಧಫನ್ ಮಾಡಲಾಗಿದೆ. ಮತ್ತೊಂದೆಡೆ ಸರ್ಕಾರ ಬಿಡುಗಡೆಗೊಳಿಸಿರುವ ಮೆಡಿಕಲ್ ಬುಲೆಟಿನ್‌ನಲ್ಲಿ ಇಡೀ ರಾಜ್ಯದಲ್ಲಿ ಮೂವತ್ತೇಳು ಜನರು ಮೃತಪಪಟ್ಟಿರುವುದಾಗಿ ತಿಳಿಸಿದೆ.

ಭದ್‌ಭದಾ ಚಿತಾಗಾರಕ್ಕೆ ತನ್ನ ಸಹೋದರನ ಅಂತಿಮ ಸಂಸ್ಕಾರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ, ಇಲ್ಲಿನ ಶವಗಳನ್ನು ನೋಡಿ ಭೋಪಾಲ್‌ ಅನಿಲ ದುರಂತ ನೆನಪಾಗಿದೆ. ಈ ಬ್ಗಗೆ ಮಾತನಾಡಿರುವ ಬಿ. ಎನ್‌. ಪಾಂಡೆ 1984ರ ಗ್ಯಾಸ್‌ ದುರಂತದ ದಿನಗಳ ಬಳಿಕ ಇಂತಹ ವಾತಾವರಣ ನೋಡುತ್ತಿರುವುದು ಇದೇ ಮೊದಲು. ಅಂದು ಆ ದುರಂತ ನಡೆದಾಗ ನಾನು ಒಂಭತ್ತನೇ ತರಗತಿಯಲ್ಲಿದ್ದೆ. ಇಂದು ನನ್ನೆದುರಿಗೇ ಎರಡು-ಮೂರು ತಾಸಿನಲ್ಲಿ 30-40 ಶವಗಳ ಅಂತ್ಯ ಸಂಸ್ಕಾರ ನಡೆದಿದೆ ಎಂದಿದ್ದಾರೆ.

ಇನ್ನು ಸರ್ಕಾರ ತನ್ನ ಮೆಡಿಕಲ್ ಬುಲೆಟಿನ್‌ನಲ್ಲಿ ಒಂದು ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರಗೊಂಡ ಮೃತದೇಹಗಳ ಸಂಖ್ಯೆಯಷ್ಟೇ ಇಡೀ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆಯಾಗಿ ನಮೂದಿಸಿರುವುದೇಕೆ ಎಂಬುವುದೇ ಸದ್ಯದ ಪ್ರಶ್ನೆ. ಸೋಂಕಿನಿಂದ ಮೃತಪಟ್ಟವರ ಮೃತದೇಹವನ್ನು ನೇರವಾಗಿ ಆಸ್ಪತ್ರೆಯಿಂದ ಚಿತಾಗಾರದ ಹಿಂದಿನ ಗೇಟ್‌ಗೆ ತರಲಾಗುತ್ತದೆ. ಇಲ್ಲಿ ಸಾಮಾಣ್ಯ ಕಾಯಿಲೆಯಿಂದ ಮೃತಪಟ್ಟವರ ದಹನಕ್ಕೆ ಬೇರೆಯೇ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಸೋಂಕು ಹರಡದಂತೆ ನಿಗಾ ವಹಿಸಲಾಘಿದೆ.