ಭೋಪಾಲ್‌(ಡಿ.30): ಉತ್ತರ ಪ್ರದೇಶದ ಬಳಿಕ ‘ಲವ್‌ ಜಿಹಾದ್‌’ ನಿಷೇಧಕ್ಕೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಕೂಡ ಸುಗ್ರೀವಾಜ್ಞೆಯ ಮೊರೆ ಹೋಗಿದೆ. ಅಧ್ಯಾದೇಶದ ಮೂಲಕ ಈ ಕಾನೂನನ್ನು ಜಾರಿಗೆ ತರಲು ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಸರ್ಕಾರ ನಿರ್ಧರಿಸಿದ್ದು, ಇದನ್ನು ರಾಜ್ಯಪಾಲರ ಒಪ್ಪಿಗೆಗೆ ಮಂಗಳವಾರ ಕಳಿಸಿಕೊಟ್ಟಿದೆ.

‘ಧಾರ್ಮಿಕ ಸ್ವಾತಂತ್ರ್ಯ ಮಸೂದೆ-2020’ ಹೆಸರಿನ ಈ ವಿಧೇಯಕಕ್ಕೆ ಕಳೆದ ಶನಿವಾರ ಸಂಪುಟ ಒಪ್ಪಿಗೆ ನೀಡಿತ್ತು. ಕೇವಲ ಮದುವೆಯ ಉದ್ದೇಶಕ್ಕಾಗಿ ಮತಾಂತರಗೊಳಿಸಿದರೆ ಅಥವಾ ಇನ್ನಾವುದೋ ಕಾರಣಕ್ಕೆ ಬಲವಂತದ ಮತಾಂತರ ಮಾಡಿದರೆ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರು.ವರೆಗೆ ದಂಡ ವಿಧಿಸುವ ಅಧಿಕಾರ ನೀಡುವ ಅಂಶವು ಇದರಲ್ಲಿದೆ. ಮಂಗಳವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಇದರ ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಲಾಗಿದೆ. ಸೋಮವಾರದಿಂದ ಆರಂಭವಾಗಬೇಕಿದ್ದ ವಿಧಾನಸಭೆ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ನಿರ್ಧರಿಸಲಾಗಿತ್ತು. ಆದರೆ ಕೆಲವು ಶಾಸಕರಿಗೆ ಕೊರೋನಾ ಬಂದ ಕಾರಣ ಅಧಿವೇಶನ ಮುಂದೂಡಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯ ಮಾರ್ಗವನ್ನು ಸರ್ಕಾರ ಕಂಡುಕೊಂಡಿದೆ.

ಕಾಯ್ದೆಯಲ್ಲೇನಿದೆ?:

* ಬೆದರಿಕೆ ಮೂಲಕ ಅಥವಾ ಪ್ರಲೋಭನೆ ಮೂಲಕ ಅಥವಾ ಇನ್ನಾವುದೋ ವಂಚನೆ ಮೂಲಕ ಬಲವಂತದ ಧಾರ್ಮಿಕ ಮತಾಂತರ ನಡೆಸುವುದು ನಿಷಿದ್ಧ. ಕೇವಲ ಮದುವೆಗಾಗಿ ಮತಾಂತರಗೊಳಿಸಿದರೆ ಮದುವೆಯೇ ಅಸಿಂಧು.

* ಬಲವಂತದ ಮತಾಂತರ ಮಾಡುವ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಶಿಕ್ಷೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಈ ಅಪರಾಧಕ್ಕೆ ಜಾಮೀನು ಇರುವುದಿಲ್ಲ.

* ಒಂದು ವೇಳೆ ಮತಾಂತರಕ್ಕೆ ಇಚ್ಛಿಸಿದಲ್ಲಿ 2 ತಿಂಗಳು ಮೊದಲೇ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಬೇಕು. ಸಲ್ಲಿಸದಿದ್ದರೆ ಆ ಮದುವೆ ರದ್ದಾಗಲಿದೆ. ಜತೆಗೆ 3ರಿಂದ 5 ವರ್ಷ ಜೈಲು ಹಾಗೂ 50 ಸಾವಿರ ರು. ದಂಡ ವಿಧಿಸಲಾಗುತ್ತದೆ.

* ಬಲವಂತದ ಮತಾಂತರ ಮಾಡಿದರೆ 1ರಿಂದ 5 ವರ್ಷ ಜೈಲು ಹಾಗೂ 25 ಸಾವಿರ ರು.ವರೆಗೆ ದಂಡ ವಿಧಿಸಲಾಗುತ್ತದೆ.

* ಪರಿಶಿಷ್ಟ ಜಾತಿ ಹಾಗೂ ಪಂಗಡ (ಎಸ್‌ಸಿ-ಎಸ್‌ಟಿ), ಅಪ್ರಾಪ್ತರನ್ನು ಬಲವಂತವಾಗಿ ಮತಾಂತರಿಸಿ ಮದುವೆ ಆದರೆ ಅಂಥವರಿಗೆ 2ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ಗರಿಷ್ಠ 1 ಲಕ್ಷ ರು. ದಂಡ ವಿಧಿಸಲಾಗುತ್ತದೆ.

* ವ್ಯಕ್ತಿಯು ಧರ್ಮವನ್ನು ಮುಚ್ಚಿಟ್ಟು ಅಥವಾ ಬೇರೆ ಧರ್ಮದ ಹೆಸರು ಹೇಳಿ ಮದುವೆಯಾದರೆ 10 ವರ್ಷ ಜೈಲು/50 ಸಾವಿರ ರು. ದಂಡ ಹಾಗೂ ಸಾಮೂಹಿಕ ಮತಾಂತರ ಮಾಡಿದರೆ 10 ವರ್ಷ ಜೈಲು/1 ಲಕ್ಷ ರು. ದಂಡ ಹಾಕಲಾಗುತ್ತದೆ.